ಪುತ್ತೂರು : ಗೂಡ್ಸ್ ವಾಹನವೊಂದರಲ್ಲಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣ ಉಪ್ಪಿನಂಗಡಿಯ 34ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ನಲ್ಲಿ ನಡೆದಿದೆ.
ಈ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿ, ಹಾಸನ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸುತ್ತಿದ್ದ ವಾಹನ ಹಾಗೂ ಜಾನುವಾರು ವಶಪಡಿಸಿಕೊಂಡಿರುವ ಘಟನೆ ಹಾಸನ ತಾಲೂಕು ಸಾಲಗಾಮೆ ಹೋಬಳಿ ನಿವಾಸಿಗಳಾದ ಪ್ರತಾಪ್ ಎಸ್.ಎಂ.(28ವ.), ಪವನ್ ಸಿ.(24ವ.), ಶ್ರೇಯಸ್ ಹೆಚ್.ವಿ.(24ವ.) ಬಂಧಿತ ಆರೋಪಿಗಳಾಗಿದ್ದಾರೆ.
ಮಾ.25ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಮನಿಶಾ ಎಂ., ಅವಿನಾಶ್ ಹೆಚ್. ಹಾಗೂ ಸಿಬ್ಬಂದಿಗಳು ಇಲಾಖಾ ವಾಹನದಲ್ಲಿ ರೌಂಡ್ಸ್ ನಲ್ಲಿದ್ದಾಗ 34ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ನೆಲ್ಯಾಡಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಹೋಗುತ್ತಿದ್ದ ಗೂಡ್ಸ್ ವಾಹನ(ಕೆಎ18, ಬಿ4928)ವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಸದ್ರಿ ವಾಹನದಲ್ಲಿ ಎರಡು ಎಮ್ಮೆ ಹಾಗೂ ಒಂದು ಹಸುವನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ.
ಈ ಪ್ರಕರಣದ ಹಿನ್ನೆಲೆ ಪೊಲೀಸರು ವಾಹನದಲ್ಲಿದ್ದ ಮೂವರು ಆರೋಪಿಗಳನ್ನು, ಬಂಧಿಸಿ ಜಾನುವಾರು ಹಾಗೂ ವಾಹನ ವಶಕ್ಕೆ ಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಜಾನುವಾರುಗಳ ಮೌಲ್ಯ ಒಟ್ಟು 42 ಸಾವಿರ ರೂ., ಹಾಗೂ ವಾಹನದ ಮೌಲ್ಯ 1.50 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸಿದ್ದಾರೆ.