ಪುತ್ತೂರು : ಪುತ್ತೂರು: ಶಿಕ್ಷಣ ಪದ್ಧತಿಯಿಂದ ದೇಶದ ಚಿತ್ರಣ ಬದಲು ಮಾಡಲು ಸಾಧ್ಯವಿದ್ದು, ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ಕ್ಷೇತ್ರದಲ್ಲೇ ಅಭ್ಯಾಸ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಐದು ಸರ್ಕಾರಿ ಪದವಿ ಕಾಲೇಜು ಹೊಂದಿರುವ ಏಕೈಕ ವಿಧಾನ ಸಭಾಕ್ಷೇತ್ರ ಪುತ್ತೂರು. ಅದರಲ್ಲೂ ಒಂದು ಮಹಿಳಾ ಕಾಲೇಜು ಇರುವುದು ವಿಶೇಷವಾಗಿದೆ. ಇಲ್ಲಿರುವ ಪ್ರಾಥಮಿಕ ಶಾಲೆಯನ್ನು ಉಳಿಸುವ ಜತೆಗೆ, ಜಾಗದ ಕಾನೂನು ಹೋರಾಟ ಮಾಡಿಯೇ ಸಿದ್ದ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಸೋಮವಾರ ಬೊಳುವಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ 5.30 ಕೋಟಿಯಲ್ಲಿ ನಿರ್ಮಾಣವಾಗಲಿರುವ ಕಟ್ಟಡದ ಶಿಲಾನ್ಯಾಸ ನಡೆಸಿ ಮಾತನಾಡಿದರು.
ಅಂಗನವಾಡಿ ಶಿಕ್ಷಕರ ವಿದ್ಯಾರ್ಹತೆಯನ್ನು ಹೆಚ್ಚುವ ಕೆಲಸವನ್ನು ಮಾಡಲಾಗಿದೆ. ಬಡವಿದ್ಯಾರ್ಥಿಗಳು ಮುಖ್ಯ ವಾಹಿನಿಗೆ ಬರಬೇಕೆಂಬ ನಿಟ್ಟಿನಲ್ಲಿ ಟ್ಯಾಬ್, ಲ್ಯಾಪ್ ಟಾಪ್ ಕೊಡುಗೆಯನ್ನು ನೀಡಲಾಗುತ್ತಿದೆ. ಮಕ್ಕಳಲ್ಲಿ ಬುದ್ಧಿಮತ್ತೆಯ ಪ್ರಮಾಣ ಬಹಳಷ್ಟು ಹೆಚ್ಚಿದ್ದು, ಈ ನಿಟ್ಟಿನಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲೂ ಪರಿವರ್ತನೆಯನ್ನು ತರಲಾಗುತ್ತಿದೆ. ಭೂ ದಾಖಲಾತಿಯ ಎಲ್ಲಾ ಸಮಸ್ಯೆಯನ್ನು ಪರಿಹರಿಸಿ, ಗೃಹ ಮಂಡಳಿಗೆ ಹಾಗೂ ಕೆ.ಆರ್.ಐ.ಡಿ.ಎಲ್. ಮೂಲಕ ಕಟ್ಟಡ ಕಾಮಗಾರಿಯನ್ನು ನಡೆಸಿ ೨೦೨೪ರಲ್ಲಿ ಕಾಲೇಜಿನ ನೂತನ ಕಟ್ಟಡದಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವಂತೆ ಮಾಡಲಾಗುವುದು ಎಂದರು.
ಪುತ್ತೂರು ನಗರ ಸಭೆ ಅಧ್ಯಕ್ಷ ಜೀವಂಧರ ಜೈನ್, ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯ ಸಂತೋಷ್ ಕುಮಾರ್, ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಡಾ. ಗಿರಿಧರ ರಾವ್, ಕರ್ನಾಟಕ ಗೃಹ ಮಂಡಳಿ ಸಹಾಯಕ ಅಭಿಯಂತರ ವಿಜಯ ಕುಮಾರ್, ಮುಖ್ಯ ಶಿಕ್ಷಕಿ ನಿವೇದಿತ, ದಿಶಾ ಸಮಿತಿ ರಾಮದಾಸ್ ಹಾರಾಡಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ ಭಟ್ ಉಪಸ್ಥಿತರಿದ್ದರು.
ಕಾಲೇಜು ಪ್ರಾಂಶುಪಾಲ ಡಾ.ಶ್ರೀಧರ ಗೌಡ ಸ್ವಾಗತಿಸಿ, ಪ್ರಾಸ್ತಾವನೆಗೈದರು. ಉಪನ್ಯಾಸಕ ಐವನ್ ಲೋಬೋ ವಂದಸಿದರು. ಉಪನ್ಯಾಸಕ ವಸಂತ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.