ರಸ್ತೆಯಲ್ಲಿ ನಮಾಜ್‌ ಮಾಡಿದರೆ ಡ್ರೈವಿಂಗ್‌ ಲೈಸೆನ್ಸ್‌, ಪಾಸ್‌ಪೋರ್ಟ್‌ ರದ್ದು

ಹೋಳಿಯ ಯಶಸ್ಸಿನ ಬಳಿಕ ಪೊಲೀಸರ ಇನ್ನೊಂದು ಕಟ್ಟುನಿಟ್ಟಿನ ಸೂಚನೆ

ಲಖನೌ: ಹೋಳಿ ಹಬ್ಬದ ಬಣ್ಣದಿಂದ ಸಮಸ್ಯೆಯಾಗುವುದಿದ್ದರೆ ಮನೆಯೊಳಗೆ ನಮಾಜು ಮಾಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದ ಉತ್ತರ ಪ್ರದೇಶ ಪೊಲೀಸರು ಈಗ ಈದ್-ಉಲ್-ಫಿತರ್ ಮತ್ತು ರಮ್ಜಾನ್‌ನ ಕೊನೆಯ ಶುಕ್ರವಾರದಂದು ರಸ್ತೆಗಳಲ್ಲಿ ನಮಾಜ್ ಮಾಡಿದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಸ್ತೆಗಳಲ್ಲಿ ನಮಾಜ್‌ ಮಾಡಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಅಂತಹವರ ಪಾಸ್‌ಪೋರ್ಟ್‌ ಹಾಗೂ ಡ್ರೈವಿಂಗ್‌ ಲೈಸೆನ್ಸ್‌ ರದ್ದುಗೊಳಿಸಬಹುದು ಎಂದು ಮೀರತ್ ಪೊಲೀಸ್ ಅಧೀಕ್ಷಕ (ನಗರ) ಆಯುಷ್ ವಿಕ್ರಮ್ ಸಿಂಗ್ ಎಚ್ಚರಿಸಿದ್ದಾರೆ. ಸ್ಥಳೀಯ ಮಸೀದಿಗಳು ಅಥವಾ ಗೊತ್ತುಪಡಿಸಿದ ಈದ್ಗಾಗಳಲ್ಲಿ ಈದ್ ಪ್ರಾರ್ಥನೆ ಸಲ್ಲಿಸಬೇಕು ಮತ್ತು ಯಾರೂ ರಸ್ತೆಗಳಲ್ಲಿ ನಮಾಜ್ ಮಾಡಬಾರದು ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ನಾಯಕ ಜಯಂತ್ ಸಿಂಗ್ ಚೌಧರಿ, ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೆ ಅಂತವರ ಪಾಸ್‌ಪೋರ್ಟ್‌ ಮತ್ತು ಡ್ರೈವಿಂಗ್‌ ಲೈಸೆನ್ಸ್‌ ರದ್ದುಗೊಳಿಸಬಹುದು. ನ್ಯಾಯಾಲಯದಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಇಲ್ಲದೆ ಹೊಸ ಪಾಸ್‌ಪೋರ್ಟ್ ಪಡೆಯುವುದು ಕಷ್ಟಕರವಾಗುತ್ತದೆ. ನ್ಯಾಯಾಲಯದಿಂದ ವ್ಯಕ್ತಿಗಳು ದೋಷಮುಕ್ತರಾಗುವವರೆಗೆ ಅಂತಹ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಮೀರತ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ವಿಪಿನ್ ಟಾಡಾ ಪ್ರತಿಕ್ರಿಯಿಸಿ, ಹಬ್ಬದ ಸಮಯದಲ್ಲಿ, ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿಗಳನ್ನು ಹರಡಿದರೆ ಅಥವಾ ಅಶಾಂತಿಯನ್ನು ಉಂಟು ಮಾಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾವು ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಡುತ್ತಿದ್ದೇವೆ. ಕೋಮು ಸಾಮರಸ್ಯವನ್ನು ಹಾಳು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಭದ್ರತೆಗಾಗಿ ಹಿಂದಿನ ಅನುಭವಗಳ ಆಧಾರದ ಮೇಲೆ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ ಮತ್ತು ಅಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಶಾಂತಿಯನ್ನು ಕಾಪಾಡಲು ಮತ್ತು ಮುಂಬರುವ ಹಬ್ಬಗಳನ್ನು ಸುಗಮವಾಗಿ ಆಚರಿಸಲು ಆಡಳಿತವು ಪ್ರಮುಖ ನಾಗರಿಕರು ಮತ್ತು ಧಾರ್ಮಿಕ ನಾಯಕರೊಂದಿಗೆ ಸಭೆ ನಡೆಸಲಾಗಿದೆ. ಕೆಲವೆಡೆ ಡ್ರೋನ್‌ಗಳನ್ನು ನಿಯೋಜಿಸಲಾಗುವುದು. ಎಲ್ಲ ಸೂಕ್ಷ್ಮ ಸ್ಥಳಗಳಲ್ಲಿ ಮಫ್ತಿಯಲ್ಲಿ ಅಧಿಕಾರಿಗಳನ್ನು ಸಹ ನಿಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top