ಕೊಲ್ಲೂರು, ಕುಕ್ಕೆ ಸಹಿತ ಪ್ರಮುಖ ದೇವಸ್ಥಾನಗಳ ಪ್ರಸಾದ ಆನ್‌ಲೈನ್ ಮೂಲಕ ವಿತರಣೆ
ಬೆಂಗಳೂರು: ಇನ್ನು ಮುಂದೆ ಕರ್ನಾಟಕದ 14 ಪ್ರಮುಖ ದೇವಸ್ಥಾನಗಳ ಪ್ರಸಾದ ಭಕ್ತರ ಮನೆ ಬಾಗಿಲಿಗೆ ಬರಲಿದೆ. ಕಲ್ಲುಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಸ್ಮ, ಬಿಲ್ವಪತ್ರೆ, ಕುಂಕುಮ, ಹೂವಿನ ಪ್ರಸಾದವನ್ನು ಭಕ್ತರು ತಾವಿದ್ದಲ್ಲಿಗೆ ತರಿಸಿಕೊಳ್ಳಬಹುದು. ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ ದೇಗುಲ ಸೇರಿದಂತೆ ರಾಜ್ಯದ ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ದೇಗುಲಗಳ ಪ್ರಸಾದ ಆನ್‌ಲೈನ್ ಮೂಲಕ ವಿತರಿಸುವ ಇ-ಪ್ರಸಾದ ಕಾರ್ಯಕ್ರಮಕ್ಕೆ ಗುರುವಾರ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.
ಪ್ರಾಯೋಗಿಕವಾಗಿ ರಾಜ್ಯದ 14 ಪ್ರಮುಖ ದೇವಾಲಯಗಳ ಪ್ರಸಾದವನ್ನು ಭಕ್ತರಿಗೆ ಆನ್‌ಲೈನ್ ಮೂಲಕ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ, ಕೊಲ್ಲೂರು ಮೂಕಾಂಬಿಕಾ ದೇವಾಲಯ ಸೇರಿದಂತೆ ಒಟ್ಟು 14 ದೇವಾಲಯದ ಪ್ರಸಾದವನ್ನು ಮನೆಗೆ ತರಿಸಿಕೊಳ್ಳಬಹುದು. ಕಲ್ಲು ಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಸ್ಮ, ಬಿಲ್ವಪತ್ರೆ, ಕುಂಕುಮ, ಹೂವು ಸೇರಿದಂತೆ ಆಯಾ ದೇವಸ್ಥಾನಗಳ ಪ್ರಮುಖ ಪ್ರಸಾದವನ್ನು ಭಕ್ತರು ತರಿಸಿಕೊಳ್ಳಬಹುದಾಗಿದೆ. ದೂರದ ದೇವಸ್ಥಾನಗಳಿಗೆ ಹೋಗಿ, ಜನರ ದಟ್ಟಣೆಯ ನಡುವೆ ದೇವರ ದರ್ಶನ ಪಡೆಯುವುದು ಕಷ್ಟ ಎಂದು ಭಾವಿಸುವರಿಗೆ ಈ ವ್ಯವಸ್ಥೆಯಿಂದ ಅನುಕೂಲವಾಗಲಿದೆ. ಮುಜರಾಯಿ ಇಲಾಖೆಯ ಅಧಿಕೃತ ವೆಬ್ಸೈಟ್ csc.devalayas.com ಕ್ಲಿಕ್ ಮಾಡಿದಾಗ, ಬಲಭಾಗದಲ್ಲಿ ಮೇಲ್ಗಡೆ ಇರುವ Login With Digital Seva connect ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಯೂಸರ್ನೇಮ್ ಅಥವಾ ಇ-ಮೇಲ್ ನಮೂದಿಸಿ ಪಾಸ್ವರ್ಡ್ ಸೆಟ್ ಮಾಡಬೇಕು. ಲಾಗಿನ್ ಆದ ನಂತರ ನಮಗೆ ಬೇಕಾದ ದೇಗುಲವನ್ನು ಆಯ್ಕೆ ಮಾಡಿ ಪ್ರಸಾದವನ್ನು ಆಯ್ಕೆ ಮಾಡಬೇಕು. ಪಾವತಿ ಮಾಡಿದ ನಂತರ ಕಾರ್ಟ್ನಲ್ಲಿ ಆರ್ಡರ್ ಡಿಸ್ಪ್ಲೇ ಆಗುತ್ತದೆ.
ಸದ್ಯ ಬೆಂಗಳೂರು ಜಯನಗರದ ಶ್ರೀ ವಿನಾಯಕಸ್ವಾಮಿ ದೇವಾಲಯ, ಗವಿಪುರದ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಹಲಸೂರಿನ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ, ಮಂಡ್ಯದ ಮೇಲುಕೋಟೆಯ ಶ್ರೀ ಚಲುವನಾರಾಯಣ ಸ್ವಾಮಿ ದೇವಾಲಯ, ಮೈಸೂರು ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ, ಕೋಲಾರದ ಮಾಲೂರಿನ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯ, ಬೀದರ್‌ನ ಶ್ರೀ ಕ್ಷೇತ್ರ ಝರಣಿ ನರಸಿಂಹ ದೇವಸ್ಥಾನ, ಬೆಳಗಾವಿ ಯಲ್ಲಮ್ಮನ ಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ದಕ್ಷಿಣ ಕನ್ನಡದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಬಳ್ಳಾರಿಯ ಶ್ರೀ ಕನಕ ದುರ್ಗಮ್ಮ ದೇವಸ್ಥಾನ, ವಿಜಯನಗರದ ಹೂವಿನಹಡಗಲಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ, ಕೊಪ್ಪಳದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಾಲಯ, ಕಲಬುರಗಿಯ ಗಾಣಗಾಪುರದ ಶ್ರೀ ಗುರುದತ್ತಾತ್ರೇಯ ಸ್ವಾಮಿ ದೇವಾಲಯ ಇವುಗಳ ಪ್ರಸಾದ ಆನ್ಲೈನ್ನಲ್ಲಿ ಸಿಗಲಿದೆ. ಅನೇಕ ದೇವಾಲಯಗಳು ಹಣೆಗೆ ಹಚ್ಚಿಕೊಳ್ಳುವ ಕುಂಕುಮ, ಗಂಧ ಇತ್ಯಾದಿ ಪ್ರಸಾದವನ್ನು ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸುವ ವ್ಯವಸ್ಥೆಯನ್ನು ಬಹಳ ಹಿಂದೆಯೇ ಮಾಡಿಕೊಂಡಿದ್ದವು. ಆದರೆ ಮುಜರಾಯಿ ಇಲಾಖೆ ಈಗ ತಿನ್ನುವ ಪ್ರಸಾದವನ್ನು ಮನೆ ಬಾಗಿಲಿಗೆ ತಲುಪಿಸಲಿದೆ.