ಪುತ್ತೂರು
: ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಜತೆಗೆ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಮಾ. 30ರಂದು ಹೋರಾಟ ಸಮಿತಿಯಿಂದ ಶಾಂತಿಯುತ ಕಾಲ್ನಡಿಗೆ ಜಾಥಾ ಹಾಗೂ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು 317 ಲಯನ್ ಜಿಲ್ಲೆಯ 8 ಪ್ರಾಂತ್ಯದ ಅಧ್ಯಕ್ಷೆ ಸಂಧ್ಯಾ ಸಚಿತ್ ರೈ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಆಂದೋಲನಕ್ಕೆ 317 ಲಯನ್ ಜಿಲ್ಲೆಯ 7 ಮತ್ತು 8 ಪ್ರಾಂತ್ಯಗಳ ಒಟ್ಟು 12 ಲಯನ್ಸ್ ಕ್ಲಬ್ಬುಗಳು ಅಖಂಡ ಬೆಂಬಲ ಘೋಷಿಸಿದೆ. ಈಗಾಗಲೇ ಹೋರಾಟ ನಡೆಸುತ್ತಿರುವ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯೊಂದಿಗೆ ಲಯನ್ಸ್ ಕ್ಲಬ್ ಗಳು ಜೊತೆಗೂಡುತ್ತಿವೆ ಎಂದರು.
ಈ ಅಭಿಯಾನವು ಲಯನ್ಸ್ ಕ್ಲಬ್ ಗಳ ಗುರಿಗೆ ಪೂರಕವಾಗಿದ್ದು, ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಿಂದ ಪುತ್ತೂರಿನ ಜನತೆಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಜನರಿಗೆ ಸಕರಾತ್ಮಕ ಬದಲಾವಣೆಯಾಗಲಿದೆ. ಈ ನಿಟ್ಟಿನಲ್ಲಿ ರಾಜಕಿಯೇತರ, ಜಾತ್ಯಾತೀಯ ಆಂದೋಲನವನ್ನಾಗಿ ಆಯೋಜಿಸಲು ಉತ್ಸಾಹಭರಿತವಾಗಿದೆ. ಮೆಡಿಕಲ್ ಕಾಲೇಜು ಸ್ಥಾಪನೆಯಾದಲ್ಲಿ ಉತ್ತಮ ಆರೋಗ್ಯ ಸೌಲಭ್ಯದ ಜತೆ ಯುವಜನರಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಎಂ.ಬಿ.ವಿಶ್ವನಾಥ ರೈ, ಝೇವೀಯರ್ ಡಿ’ಸೋಜಾ, ಲಯನ್ ಜಿಲ್ಲೆ 317 ರ ಡಿ. 7 ಪ್ರಾಂತ್ಯ ಅಧ್ಯಕ್ಷ ಸುದರ್ಶನ್ ಪಡಿಯಾರ್ ಉಪಸ್ಥಿತರಿದ್ದರು.