ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರ್ ಬಂಟ್ವಾಳ ಕೇಂದ್ರ ಸಮಿತಿಯ ಸಭೆಯು ಉಪ್ಪಳ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಜರಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಯೋಗಾಶ್ರಮದ ಶ್ರೀ ನಿತ್ಯಾನಂದ ಸ್ವಾಮೀಜಿಯವರು ಜ್ಞಾನವೃದ್ಧರಾದ ಹಿರಿಯರ ಅನುಭವವು ನಿಂತ ನೀರಾಗದೆ ಸಮಾಜದ ಒಳಿತಿಗೆ ಬಳಕೆಯಾಗಬೇಕು. ಹಿರಿಯರ ಸೇವಾ ಪ್ರತಿಷ್ಠಾನದ ಸೇವಾ ಕಾರ್ಯಗಳು ಅನುಭವಗಳ ವಿನಿಮಯದೊಂದಿಗೆ ನಡೆಯುತ್ತಿರುವುದು ಇಂದಿನ ಸಾಮಾಜಿಕ ಪರಿಸರಕ್ಕೆ ಅತ್ಯಂತ ಉಪಯುಕ್ತವಾಗಿದ್ದು ಪ್ರತಿಷ್ಠಾನದ ಸೇವಾಕಾರ್ಯಗಳಿಗೆ ಆಶ್ರಮದ ಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಕಯ್ಯೂರು ನಾರಾಯಣ ಭಟ್ ವಹಿಸಿದ್ದು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ, ಕಾಸರಗೋಡು ಪರಿಸರದಲ್ಲಿ ಕೂಡ ಘಟಕಗಳನ್ನು ಆರಂಭಿಸಲಾಗುತ್ತಿದೆಯೆಂದರು. ಪ್ರತಿಷ್ಠಾನದ ವತಿಯಿಂದ ಒಂದು ದಿನದ ಕಾರ್ಯಗಾರ ಮತ್ತು ಉತ್ತರ ಭಾರತ ಪ್ರವಾಸವನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು .
ಪ್ರತಿಷ್ಠಾನದ ತಾಲೂಕು ಪ್ರತಿನಿಧಿಗಳಾದ ಉದಯ ಶಂಕರ ರೈ ಪುಣಚ, ಗುಂಡ್ಯಡ್ಕ ಈಶ್ವರ ಭಟ್, ರಾಮಕೃಷ್ಣ ನಾಯಕ್ ಕೋಕಳ, ಸೀತಾರಾಮ ಸಾಲೆತ್ತೂರು ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಕೋಶಾಧಿಕಾರಿ ಅನಾರು ಕೃಷ್ಣ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.