ಸೋಷಿಯಲ್ ಮೀಡಿಯಾಗಳಲ್ಲಿರುವ ವೀಡಿಯೊಗಳನ್ನು ಡಿಲೀಟ್ ಮಾಡಲು ಆದೇಶ
ಬೆಂಗಳೂರು: ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಯವರ ವಿರುದ್ಧ ನಡೆಯುತ್ತಿರುವ ಅವಹೇಳನ ಮತ್ತು ಅಪಪ್ರಚಾರಕ್ಕೆ ನ್ಯಾಯಾಲಯ ತಡೆ ನೀಡಿದೆ. ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಈ ಕುರಿತು ಜಾನ್ ಡೋ (ಅಶೋಕ ಕುಮಾರ್) ಆದೇಶ ನೀಡಿದೆ. ಜತೆಗೆ ಈವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವೀಡಿಯೊಗಳನ್ನು ಡಿಲೀಟ್ ಮಾಡುವಂತೆ ಸೂಚನೆ ನೀಡಿದೆ.
ಇತ್ತೀಚೆಗೆ ಸೌಜನ್ಯ ಪ್ರಕರಣದ ವಿಚಾರವಾಗಿ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಕುರಿತು ಹಲವು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಬೆನ್ನಲ್ಲೆ ಎ.ಎಸ್.ಸುಖೇಶ್ ಮತ್ತು ಶೀನಪ್ಪ ಸೇರಿದಂತೆ ನಾಲ್ವರು ದಾವೆ ಹಾಕಿದ್ದರು. ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎನ್.ಎಸ್.ನಟರಾಜ್ ವಿಚಾರಣೆ ನಡೆಸಿದ್ದಾರೆ. ಹಿರಿಯ ನ್ಯಾಯವಾದಿ ಎಸ್.ರಾಜಶೇಖರ್ ಹಿಳಿಯಾರು ಧರ್ಮಸ್ಥಳ ಪರ ವಾದ ಮಂಡಿಸಿದ್ದರು.
ಜಾನ್ ಡೋ (ಅಶೋಕಕುಮಾರ್) ಆದೇಶ ಎಂದರೆ ಅಜ್ಞಾತ ಅಥವಾ ಪತ್ತೆಯಾಗದ ವ್ಯಕ್ತಿಗಳ ವಿರುದ್ಧವೂ ಜಾರಿಯಾಗುವ ಕಾನೂನು ಕ್ರಮ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಮತ್ತು ಇತರ ಆನ್‌ಲೈನ್ ತಾಣಗಳಲ್ಲಿ ಅವಹೇಳನಕಾರಿ ಮತ್ತು ಅಪಪ್ರಚಾರ ಹೆಚ್ಚಿರುವ ಕಾರಣ ಇದನ್ನು ತಡೆಯಲು ಈ ಆದೇಶ ಬಹಳ ಪ್ರಮುಖವಾಗಿದೆ.
ಈ ಆದೇಶದ ಪ್ರಕಾರ ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಸ್ಥೆಗಳು ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ಅಪಪ್ರಚಾರವನ್ನು ಪ್ರಕಟಿಸುವುದು, ಹಂಚಿಕೊಳ್ಳುವುದು ಅಥವಾ ಹರಡುವುದನ್ನು ನಿಷೇಧಿಸಲಾಗಿದೆ. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮ ಸಂಸ್ಥೆಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಯಾವುದೇ ಅವಹೇಳನಕಾರಿ ವಿಚಾರ ಹಂಚಿಕೊಂಡಿದ್ದರೆ ತಕ್ಷಣ ಅಳಿಸಿಹಾಕುವುದು ಮತ್ತು ಮುಂದುವರಿಸಿದರೆ ನ್ಯಾಯಾಲಯದ ಆದೇಶ ಉಲ್ಲಂಘನೆ ಆಗುವ ಸಾಧ್ಯತೆ ಇರುತ್ತದೆ.
ಈ ಆದೇಶ ಹೊರಡಿಸಿದ ಬೆನ್ನಲ್ಲೆ ಸೌಜನ್ಯ ಪ್ರಕರಣದ ಕುರಿತು ಸಮೀರ್ ಎಂಡಿ ಎಂಬ ಯೂಟ್ಯೂಬರ್ ಯುಟ್ಯೂಬ್ ಚಾನೆಲ್‌ನಲ್ಲಿ ಹಾಕಿದ್ದ ವೀಡಿಯೊ ಡಿಲೀಟ್ ಆಗಿದೆ.