ಪುತ್ತೂರು: ತಾಲೂಕು ಮಟ್ಟದ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯಗಳ ಸಂಯುಕ್ತ ವಾರ್ಷಿಕೋತ್ಸವ ಹಾಸ್ಟೆಲ್ ನ ಒಳಾಂಗಣದಲ್ಲಿ ನಡೆಯಿತು.

ನ್ಯೂಸ್ ಪುತ್ತೂರು ಇದರ ಅಧ್ಯಕ್ಷ ಸೀತಾರಾಮ ಕೇವಳ ಮಾತನಾಡಿ, ಸರ್ಕಾರ ಒದಗಿಸಿರುವ ಹಾಸ್ಟೆಲ್ ಸೌಲಭ್ಯವನ್ನು ಬಳಸಿ ಪ್ರಗತಿ ಹೊಂದಿದ ವಿದ್ಯಾರ್ಥಿನಿಯರು ಮುಂದಿನ ಪೀಳಿಗೆಯ ಮಕ್ಕಳಿಗೆ ಆಧಾರವಾಗುವ ಮೂಲಕ ಋಣ ಸಂದಾಯ ಮಾಡಬೇಕು ಎಂದು ಕರೆಯಿತ್ತರು. ಇತರ ಗಣ್ಯರೊಡಗೂಡಿ ಐದು ನಿಲಯಗಳ ಈ ಕೆಳಗಿನ ಶೈಕ್ಷಣಿಕ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಅವರು ಸನ್ಮಾನಿಸಿದರು.

ಪ್ರಥಮ ಸ್ಥಾನಿಗಳಾದ ನರಿಮೊಗರು ನಿಲಯದ ಸಾತ್ವಿಕ ಎ.ಟಿ. (ವಿವೇಕಾನಂದ ಕಾಲೇಜು – ತೃತೀಯ ಬಿ.ಕಾಂ.), ಸಾಲ್ಮರ ನಿಲಯದ ಸ್ವಾತಿ (ವಿವೇಕಾನಂದ ಕಾಲೇಜು, ಪುತ್ತೂರು – ತೃತೀಯ ಬಿ.ಕಾಂ.), ಉಪ್ಪಿನಂಗಡಿ ನಿಲಯದ ನಿಶ್ಮಿತಾ ಕೆ .ಎನ್. (ಸರಕಾರಿ ಪ್ರಥಮ ದರ್ಜೆ ಕಾಲೇಜು, ಉಪ್ಪಿನಂಗಡಿ – ತೃತೀಯ ಬಿ.ಕಾಂ.), ಬೆಟ್ಟಂಪಾಡಿ ನಿಲಯದ ಭಾವನಾ (ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ- ತೃತೀಯ ಬಿ.ಎಸ್ಸಿ.), ಬನ್ನೂರು ನಿಲಯದ ಸಾಕ್ಷಿ ಕೆ.ಇ. (ಅಕ್ಷಯ ಕಾಲೇಜು, ತೃತೀಯ ಬಿ.ಕಾಂ.), ದ್ವಿತೀಯ ಸ್ಥಾನಿಗಳಾದ ನರಿಮೊಗರು ನಿಲಯದ ಸ್ನೇಹಾ ಕೆ. ಎ. (ವಿವೇಕಾನಂದ ಕಾಲೇಜು – ತೃತೀಯ ಬಿ.ಕಾಂ.), ಸಾಲ್ಮರ ನಿಲಯದ ಹರ್ಷಿತಾ (ವಿವೇಕಾನಂದ ಕಾಲೇಜು – ತೃತೀಯ ಬಿ.ಸಿ.ಎ.), ಉಪ್ಪಿನಂಗಡಿ ನಿಲಯದ ಶೈನು ಎಸ್. (ಸರಕಾರಿ ಪ್ರಥಮ ದರ್ಜೆ ಕಾಲೇಜು, ಉಪ್ಪಿನಂಗಡಿ – ತೃತೀಯ ಬಿ.ಎಸ್ಸಿ.), ಬೆಟ್ಟಂಪಾಡಿ ನಿಲಯದ ವಾಣಿಶ್ರೀ (ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ- ತೃತೀಯ ಬಿ.ಎಸ್ಸಿ.) ಮತ್ತು ಬನ್ನೂರು ನಿಲಯದ ಮೋಹಿತಾ ಜೆ.ರೈ. (ವಿವೇಕಾನಂದ ಕಾಲೇಜು – ತೃತೀಯ ಬಿ.ಸಿ.ಎ.) ಸನ್ಮಾನ ಸ್ವೀಕರಿಸಿದರು.
ಸಾಮಾಜಿಕ ಧುರೀಣ, ಸ್ವಾಮಿ ಕೊರಗಜ್ಜನ ಕ್ಷೇತ್ರದ ನಿರ್ವಾಹಕರಾದ ಸುವರ್ಣ ಫಾರ್ಮ್ಸ್ ನ ವೇದನಾಥ ಸುವರ್ಣ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ವಹಿಸಿಕೊಳ್ಳಬೇಕಾದ ಎಚ್ಚರಿಕೆ, ಜವಾಬ್ದಾರಿಗಳನ್ನು ಮನವರಿಕೆ ಮಾಡಿಕೊಟ್ಟರು.
ಸಭಾಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ದ.ಕ. ಜಿಲ್ಲಾಧಿಕಾರಿ ಬಿಂದಿಯಾ ನಾಯಕ್ ಮಾತನಾಡಿ, ಪ್ರತಿಭೆ, ಸಾಮರ್ಥ್ಯಗಳ ಸಂಗಮವಾಗಿರುವ ವಾರ್ಷಿಕೋತ್ಸವ ಆಚರಣೆ ಒಂದು ಮಾದರಿ ಕಾರ್ಯಕ್ರಮವಾಗಿದೆ ಎಂದರು. ಸಿಕ್ಕಿರುವ ಸರಕಾರಿ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಸಮಾಜದ ಆಸ್ತಿಗಳಾಗಬೇಕೆಂದು ಮಕ್ಕಳಿಗೆ ಕರೆಯಿತ್ತರು.
ಆರಂಭದಲ್ಲಿ ನರಿಮೊಗರು ನಿಲಯದ ವಿದ್ಯಾರ್ಥಿನಿಯರಿಂದ ಯಕ್ಷಗಾನ ಮತ್ತು ಬನ್ನೂರು ನಿಲಯದ ವಿದ್ಯಾರ್ಥಿನಿಯರಿಂದ ಕುಣಿತ ಭಜನೆಗಳ ಪ್ರದರ್ಶನವಿತ್ತು.
ಉಡುಪಿಯ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಹರಿಣಾಕ್ಷಿ ಎಂ.ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಲ್ಮರ ನಿಲಯದ ವಿದ್ಯಾರ್ಥಿನಿ ಲತಾ ಸ್ವಾಗತಿಸಿ ಬನ್ನೂರು ನಿಲಯದ ವಿದ್ಯಾರ್ಥಿನಿ ಸುಖಿತಾ ರೈ ವಂದಿಸಿದರು. ನರಿಮೊಗರು ನಿಲಯದ ವಿದ್ಯಾರ್ಥಿನಿ ಹರ್ಷಿತಾ ಕೆ. ಕಾರ್ಯಕ್ರಮ ನಿರೂಪಿಸಿದರು. ನರಿಮೊಗರು ನಿಲಯದ ಪಾಲಕಿ ಪವಿತ್ರಾ ನಂದ್ರಾಳ್ ಅವರು ಒಟ್ಟು ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ನರಿಮೊಗರು, ಸಾಲ್ಮರ, ಉಪ್ಪಿನಂಗಡಿ, ಬನ್ನೂರು ಮತ್ತು ಬೆಟ್ಟಂಪಾಡಿಗಳ ಒಟ್ಟು ಐದು ಹಾಸ್ಟೆಲ್ ಗಳ ವಿದ್ಯಾರ್ಥಿನಿಯರು, ನಿಲಯ ಪಾಲಕಿಯರು, ಸಿಬ್ಬಂದಿಗಳು ಭಾಗವಹಿಸಿದ್ದರು. ಸಭೆಯ ಬಳಿಕ ವಿದ್ಯಾರ್ಥಿನಿಯರಿಂದ ವಿವಿಧ ಬಗೆಯ ಪ್ರತಿಭಾ ಪ್ರದರ್ಶನಗಳು ನಡೆದವು.