ನಿಯಮ ರೂಪಿಸುವವರಿಗೆ ನಿಯಮದ ಪಾಠ ಮಾಡಿದ ಸಾಮಾನ್ಯ ಜನ…

ಪುತ್ತೂರು: ಸಾಮಾನ್ಯ ಜನ ಒಂದು ಮನೆ, ಮಳಿಗೆ ಕಟ್ಟಲು ಮುಂದಾದಲ್ಲಿ, ಸರಕಾರಕ್ಕೆ ಸಂಬಂಧಪಟ್ಟ  ಇಲಾಖೆಗಳು ಹಲವು ಕಾನೂನು, ನಿಯಮಗಳನ್ನು ಆತನ ಮುಂದೆ ಇಡುತ್ತೆ. ಆದರೆ ಸರಕಾರದ ಆಡಳಿತ ವ್ಯವಸ್ಥೆ ರಸ್ತೆಯೋ, ಚರಂಡಿಯೋ ಮಾಡುವ ಸಂದರ್ಭದಲ್ಲಿ ತಾನು ರೂಪಿಸಿದ ಕಾನೂನನ್ನೇ ಮುರಿಯೋದು ಸಾಮಾನ್ಯ. ಇಂಥಹುದೇ ಒಂದು ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ನಡೆದಿದ್ದು, ನಾಗರಿಕರೇ ಇದೀಗ ನಗರಸಭೆ ಅಧಿಕಾರಿಗಳಿಗೆ ಕಾನೂನು ಪಾಲಿಸಿ ಕಾಮಗಾರಿ ನಡೆಸುವಂತೆ ಒತ್ತಡ ಹೇರಲಾರಂಭಿಸಿದ್ದಾರೆ. ಕಾಮಗಾರಿ ನಡೆದ ಬಳಿಕ ಕಳಪೆ, ಉಪಯೋಗಕ್ಕಿಲ್ಲದ್ದು ಎನ್ನುವ ಬದಲು ಕಾಮಗಾರಿ ಆರಂಭದ ಮೊದಲೇ ಇಲ್ಲಿನ ಜನ ಎಚ್ಚೆತ್ತುಕೊಂಡಿದ್ದಾರೆ.

ಸಾಮಾನ್ಯ ವ್ಯಕ್ತಿಯೋರ್ವನಿಗೆ ಸರಕಾರದ ಎಲ್ಲಾ ನಿಯಮ-ಕಾನೂನು ಅನ್ವಯವಾಗುವಂತೆ, ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಗಳು ಯಾವ ರೀತಿಯಲ್ಲಿ ತಾವೇ ಸಿದ್ಧಪಡಿಸಿದ ನಿಯಮಗಳನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಯಾವಾಗ ಸಾರ್ವಜನಿಕರೇ ಸರಕಾರಿ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಲು ಆರಂಭಿಸುತ್ತಾರೋ, ಅಂದು ಜನತೆಗೆ ಗುಣಮಟ್ಟದ, ನಿಯಮಗಳಿಗನುಸಾರವಾದ ಮೂಲಭೂತ ಸೌಲಭ್ಯಗಳು ಸಿಗುತ್ತೆ.  ಇಂತಹುದೇ ಒಂದು ಪ್ರಯತ್ನಕ್ಕೆ ಇದೀಗ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರಸಭಾ ವ್ಯಾಪ್ತಿಯ ಕೆರೆಮೂಲೆ ಎನ್ನುವ ಪ್ರದೇಶದ ನಿವಾಸಿಗಳು ಮುಂದಾಗಿದ್ದಾರೆ. ಕೆರೆಮೂಲೆಯಿಂದ ಕೇಪುಳು ಮೂಲಕ ಪುತ್ತೂರು-ಉಪ್ಪಿನಂಗಡಿ ರಸ್ತೆಯನ್ನು ಸಂಪರ್ಕಿಸುವ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಲು ಪುತ್ತೂರು ನಗರಸಭೆ ಸಿದ್ಧತೆಯನ್ನು ನಡೆಸಿದೆ. ನಗರಸಭೆ ನಿಯಮದ ಪ್ರಕಾರ ರಸ್ತೆ 7 ಮೀಟರ್ ಅಗಲ, ಬಳಿಕ ಎರಡೂ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಇರಬೇಕು ಎಂದಿದ್ದರೂ, ನೂತನವಾಗಿ ಆರಂಭಿಸಿದ ಈ ರಸ್ತೆಯನ್ನು ಚರಂಡಿ ಸೇರಿದಂತೆ ಕೇವಲ 6 ಮೀಟರ್ ಅಗಲದಲ್ಲಿ ಮಾಡಲಾಗುತ್ತಿದೆ. 7 ಮೀಟರ್ ಅಗಲದ ರಸ್ತೆ ಮಾಡಲು ಈ ಭಾಗದಲ್ಲಿ ಜಾಗದ ಸಮಸ್ಯೆಯೂ ಇಲ್ಲ. ಕೇವಲ ರಸ್ತೆ ಬದಿಯಿರುವ ಸರಕಾರಿ ಜಾಗವನ್ನು ಒತ್ತುವರಿ ಮಾಡಿರುವುದನ್ನು ಬಳಸಿಕೊಂಡರೆ ಸಾಧ್ಯವಿಲ್ಲದ ಕೆಲಸವೂ ಅಲ್ಲ. ಆದರೆ ನಗರಸಭೆ ಸಿಕ್ಕ ಜಾಗದಲ್ಲಿ ಜಾಗದಲ್ಲಿ ಚರಂಡಿ, ರಸ್ತೆ ಮಾಡಿ ತನ್ನ     ಕೈತೊಳೆದುಕೊಳ್ಳಲು ಮುಂದಾಗಿದೆ. ಆದರೆ ಈ ಭಾಗದ ಜನ ಮಾತ್ರ ನಗರಸಭೆಯ ಈ ನಿಯಮ ಉಲ್ಲಂಘಿಸಿ ನಡೆಸುವ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ, ಅಧಿಕಾರಿಗಳಿಗೆ ಕಾನೂನಿನ ಪಾಢ ಹೇಳಲು ಮುಂದಾಗಿದ್ದಾರೆ.

ಸ್ಥಳೀಯರ ವಿರೋಧವನ್ನು ಮನಗಂಡ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರ ರಾತ್ರೋರಾತ್ರಿ ರಸ್ತೆ ಪಕ್ಕದ ಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾನೆ. ಸ್ಥಳೀಯರು ಬೆಳಗ್ಗೆ ಎದ್ದು ನಖಡುವ ಸಂದರ್ಭದಲ್ಲಿ ಸುಮಾರು 25 ಮೀಟರ್ ನಷ್ಟು ಉದ್ದದ ಚರಂಡಿ ಕೆಲಸವನ್ನೂ ಮಾಡಿ ಮುಗಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಪುತ್ತೂರು ನಗರಸಭೆ ಕಮಿಷನರ್ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳಿಗೆ ತಮ್ಮ ಆಕ್ಷೇಪವನ್ನು ಲಿಖಿತವಾಗಿ ನೀಡಿದ್ದಾರೆ. ಆಕ್ಷೇಪದ ಮೇಲೆಯೂ ಕಾಮಗಾರಿ ನಿರ್ವಹಿಸಿದಲ್ಲಿ ಅಧಿಕಾರಿಗಳು,ಗುತ್ತಿಗೆದಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಲೋಕಾಯುಕ್ತ ಮತ್ತು ನ್ಯಾಯಾಲಯದ ಮೊರೆ ಹೋಗುವ ಎಚ್ಚರಿಕೆಯನ್ನೂ ನೀಡಲಾಗಿದೆ.

































 
 

ಈ ಹಿಂದೆ ಇದೇ ಪರಿಸರದಲ್ಲಿ ನಗರಸಭಾ ನಿಯಮ ಉಲ್ಲಂಘಿಸಿ ರಸ್ತೆ ಕಾಮಗಾರಿಗಳನ್ನು ನಡೆಸಿದ ಪರಿಣಾಮವನ್ನು ಈ ಭಾಗದ ಜನ ಇಂದು ಅನುಭವಿಸುವಂತಾಗಿದ್ದು, ಮುಂದೆ ಇಂತಹ ಕಣ್ಣೊರೆಸುವ ಪ್ರಯತ್ನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top