ಪುತ್ತೂರು: ಎನ್.ಐ.ಎ. ತಂಡಕ್ಕೆ ಬೆಂಗಾವಲು ವಾಹನವಾಗಿ ಸಾಗುತ್ತಿದ್ದ ಪೊಲೀಸ್ ಜೀಪ್ ಡಿಕ್ಕಿಯಾಗಿ ಮೃತಪಟ್ಟ ಬೈಕ್ ಸವಾರ, ಆರ್ಲಪದವಿನ ಪಾಣಾಜೆ ಸಿಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್ ನಾಯ್ಕ್ (48) ಅವರ ಮೃತದೇಹದ ಅಂತಿಮ ದರ್ಶನ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ನಡೆಯಿತು. ಬಳಿಕ ಸ್ವಗೃಹ ಕೋಟೆಯಲ್ಲಿ ಅಂತಿಮ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಸೋಮವಾರ ಬೆಳಿಗ್ಗೆ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಆರ್ಲಪದವಿಗೆ ತರಲಾಯಿತು. ಪಾಣಾಜೆ, ನಿಡ್ಪಳ್ಳಿ, ಬೆಟ್ಟಂಪಾಡಿ ಗ್ರಾಮದ ನೂರಾರು ಮಂದಿ ಆರ್ಲಪದವಿಗೆ ಆಗಮಿಸಿ, ಭಾವಪೂರ್ಣ ಅಂತಿಮ ನಮನ ಸಲ್ಲಿಸಿದರು.
ಮೃತದೇಹವನ್ನು ಮನೆಗೆ ಕೊಂಡೊಯ್ಯುತ್ತಿದ್ದಂತೆ, ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಮನೆಯ ಆಧಾರಸ್ತಂಭವೇ ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲವೇನೋ ಎಂಬಂತೆ ಭಾಸವಾಗುತ್ತಿತ್ತು.
ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ್ ಸಹಿತ ಪೊಲೀಸ್ ಅಧಿಕಾರಿಗಳು ಮೃತರ ಸಂಬಂಧಿಕರಿಂದ ಮಾಹಿತಿ ಪಡೆದುಕೊಂಡರು.
ಮೃತರು ತಾಯಿ ಸರಸ್ವತಿ, ಪಾಣಾಜೆ ವಿವೇಕ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಪತ್ನಿ ಅನುರಾಧ, ಪುತ್ರಿಯರಾದ ತೃಷಾ ಮತ್ತು ತನ್ವಿ ಅವರನ್ನು ಅಗಲಿದ್ದಾರೆ.
ಘಟನೆ:
ಪುತ್ತೂರಿನಿಂದ ಆರ್ಲಪದವಿನಲ್ಲಿರುವ ಮನೆ ಕಡೆ ಹೊರಟಿದ್ದ ಲಕ್ಷ್ಮಣ್ ನಾಯ್ಕ್ ಅವರ ಬೈಕಿಗೆ ಎದುರಿನಿಂದ ಬಂದ ಪೊಲೀಸ್ ಜೀಪ್ ಭಾನುವಾರ ರಾತ್ರಿ ಢಿಕ್ಕಿ ಹೊಡೆದಿದೆ. ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಸಂಪ್ಯ ಮಸೀದಿ ಸಮೀಪದಲ್ಲೇ ಘಟನೆ ನಡೆದಿದ್ದು, ಅಪಘಾತದ ತೀವ್ರತೆಗೆ ಲಕ್ಷ್ಮಣ್ ನಾಯ್ಕ ಗಂಭೀರ ಗಾಯಗೊಂಡಿದ್ದರು.
ಸ್ಥಳಕ್ಕಾಗಮಿಸಿದ ನಗರಸಭೆ ಮಾಜಿ ಸದಸ್ಯ ರಮೇಶ್ ರೈ ಅವರು ಗಾಯಾಳುವನ್ನು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರಾದರೂ, ಅಷ್ಟರಲ್ಲೇ ಕೊನೆಯುಸಿರೆಳೆದಿದ್ದರು. ಢಿಕ್ಕಿಯ ರಭಸಕ್ಕೆ ಲಕ್ಷ್ಮಣ್ ನಾಯ್ಕ ಅವರ ಹೆಲ್ಮೆಟ್ ಪುಡಿಯಾಗಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು.