ಪುತ್ತೂರು: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾರ್ಚ್ 28, 2022 ರಂದು ಅಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ 780 ಕೋಟಿ ರೂ. ಅನುದಾನ ಬಿಡುಗಡೆ ಆದೇಶ ಆಗಿದ್ದು, ಜತೆಗೆ 230 ಕೋಟಿ ರೂ. ಕಡಬ, ಬೆಳ್ತಂಗಡಿ, ಪುತ್ತೂರಿಗೆ ಅನುದಾನ ನೀಡಲಾಗಿದೆ. ಆದರೆ ಪುತ್ತೂರು ಹಾಲಿ ಶಾಸಕರು 780 ಕೋಟಿ ರೂ. ಅನುದಾನದ ಬದಲಿಗೆ 1010 ಕೋಟಿಯ ಫ್ಲೆಕ್ಸ್ ಗಳನ್ನು ಹಾಕಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ನಾಚಿಕೆ ಗೇಡಿನ ವಿಚಾರ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಹುಕುಡಿಯುವ ನೀರಿನ ಯೋಜನೆ ಕೇಂದ್ರ ಸರಕಾರದ 50 ಶೇ. ಹಾಗೂ ರಾಜ್ಯ ಸರಕಾರದ 50 ಶೇ. ಅನುದಾನದಲ್ಲಿ ನಡೆಯುತ್ತಿದ್ದು, ಬಿಜೆಪಿ ಆಡಳಿತ ಅವಧಿಯಲ್ಲಿ ಆಗಿನ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಪರ ಮುಖ್ಯ ಕಾರ್ಯದರ್ಶಿ ಅತೀಕ್ ಅವರ ಸರಕಾರದಿಂದ ಈ ಯೋಜನೆ ಅನುಷ್ಠಾನಗೊಂಡಿರುತ್ತದೆ ಎಂದು ದಾಖಲೆ ಸಮೇತ ಮಾಧ್ಯಮದವರ ಮುಂದಿಟ್ಟರು.
ಮೇ 23 ರಂದು ಅಶೋಕ್ ಕುಮಾರ್ ರೈ ಅವರ ಅಧಿಕಾರ ಆರಂಭಗೊಂಡಿದ್ದು, ಅಲ್ಲಿಂದ ಈ ವಿಚಾರವನ್ನು ಮರೆಮಾಚಿ ಒಟ್ಟು ಬಿಜೆಪಿ ಸರಕಾರದ ಅವಧಿಯಲ್ಲಿ ಮಂಜೂರಾತಿ ಆದ ಕಾಮಗಾರಿಯನ್ನು ತನ್ನದೆಂದು ಹೇಳಿಕೊಳ್ಳುವುದು ಮೂರ್ಖತನ. ಈ ಕುರಿತು ಅನುದಾನ ತಂದ ದಾಖಲೆ ಇದ್ದರೆ ದಾಖಲೆ ಸಮೇತ ಮಾಧ್ಯಮಗಳ ಮುಂದೆ ಬಹಿರಂಗಪಡಿಸಲಿ ಎಂದು ಸವಾಲೆಸೆದರು.
ಹೊಸ ವೈದ್ಯಕೀಯ ಕಾಲೇಜು ಆರಂಭ ಮಾಡಲು ಕನಿಷ್ಠ 20 ಎಕ್ರೆ ಜಾಗ, ಕನಿಷ್ಠ 300 ಹಾಸಿಗೆಯ ಆಸ್ಪತ್ರೆ ಇರಬೇಕು. ಇದು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಸಾಧ್ಯ. ಅಲ್ಲದೆ ಇಂಡಿಯನ್ ಮೆಡಿಕಲ್ ಕೌನ್ಸಿಲ್ ನಿಯಮದ ಪ್ರಕಾರ ರಾಜ್ಯ ಸರಕಾರ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸದೆ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಗೆ ಅರ್ಜಿ ಹಾಕಿದೆ. ಬಜೆಟ್ ನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುವುದು ಎಂದು ಹೇಳಿರುವುದು ನಂಬಲಾಗದ ವಿಚಾರ. ಯಾಕೆಂದರೆ ರಾಜ್ಯದ ಇತರ ಭಾಗಗಳಿಗೆ ನಿಗದಿತವಾಗಿ ಇಂತಿಷ್ಟು ಹಾಸಿಗೆ ಆಸ್ಪತ್ರೆ ಎಂದು ಉಲ್ಲೇಖ ಮಾಡಲಾಗಿದೆ. ಆದರೆ ಪುತ್ತೂರಿಗೆ ಆಸ್ಪತ್ರೆಯನ್ನು ಉನ್ನತೀಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮ ವಹಿಸಲಾಗುವುದು ಎಂದಷ್ಟೇ ಹೇಳಲಾಗಿದೆ. ಇದು ಶಾಸಕರನ್ನು ತೃಪ್ತಿ ಪಡಿಸುವ ಉದ್ದೇಶದಿಂದ ಬಜೆಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳು ಇಂತಿಷ್ಟು ಹಾಸಿಗೆಯ ಆಸ್ಪತ್ರೆ ಎಂದು ಉಲ್ಲೇಖ ಮಾಡಿದ್ದರೆ ಜನರು ವಿಶ್ವಾಸ ವ್ಯಕ್ತಪಡಿಸುತ್ತಿದ್ದರು ಎಂದು ತಿಳಿಸಿದರು.
2021 ರಲ್ಲೇ ಬಿಜೆಪಿ ಸರಕಾರ ಇರುವಾಗ ಪುತ್ತೂರಿನ ತಾಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಅಂದಾಜು ಪಟ್ಟಿ ತಯಾರಿಸಿ 300 ಹಾಸಿಗೆಗಳ 100 ಕೋಟಿ ಅಂದಾಜು ಮೊತ್ತಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವತಿಯಿಂದ ನಿರ್ದೇಶಿಸಿ ಬೆಂಗಳೂರಿನ ಆರೋಗ್ಯಸೌಧಕ್ಕೆ ಕಳುಹಿಸಲಾಗಿದೆ. ಇಷ್ಟೆಲ್ಲಾ ಕೆಲಸಗಳನ್ನು ಮಾಡಿದ ದಾಖಲೆಯಿದ್ದರೂ ಹಿಂದಿನ ಶಾಸಕರು ಏನೂ ಮಾಡಿಲ್ಲ, ಎಲ್ಲಾ ನಾನೇ ಮಾಡಿದ್ದು ಎಂದು ಪತ್ರಿಕೆಗಳಿಗೆ ಹೇಳಿಕೆ ನೀಡಿ, ಜಾಹೀರಾತು ನೀಡಿ ನಾನೊಬ್ಬ ಜನಸೇವಕ ಎಂಬುದನ್ನು ಮರೆತು ಪ್ರಚಾರಪ್ರಿಯ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಮೆಡಿಕಲ್ ಕಾಲೇಜು ತರುವ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಹಾಗೂ ಕೇಂದ್ರ ಸರಕಾರ ವೈದ್ಯಕೀಯ ಕಾಲೇಜು ಸ್ಥಾಪಿಸಲು ಏನು ನಿಯಮಾವಳಿ ಮಾಡಿದೆ ಎಂದು ಜನತೆಗೆ ತಿಳಿಸುವ ಉದ್ದೇಶದಿಂದ ಸುಳ್ಳೇ ಸತ್ಯ ಆಗಬಾರದು ನಿಜ ಸಂಗತಿ ಜನರಿಗೆ ಅರಿವಾಗಬೇಕು ಎಂಬ ಉದ್ದೇಶದಿಂದ ಈ ವಿಚಾರವನ್ನು ಮಾಧ್ಯಮದ ಮುಂದೆ ಪ್ರಸ್ತುತಪಡಿಸುತ್ತಿದ್ದೇನ ಎಂದು ಅವರು ಈ ಸಂದರ್ಭ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಅನಿಲ್ ತೆಂಕಿಲ ಉಪಸ್ಥಿತರಿದ್ದರು.