ಕೊನೆಗೂ ಕಾರ್ಯಾಚರಣೆಗಿಳಿದ ಮೀನುಗಾರಿಕೆ ಇಲಾಖೆ
ಉಡುಪಿ : ಈ ವರ್ಷ ಕಂಡುಬಂದಿರುವ ಮೀನಿನ ಕೊರತೆಗೆ ಸಮುದ್ರದಲ್ಲಿ ನಡೆಯುತ್ತಿರುವ ಲೈಟ್‌ಫಿಶಿಂಗ್ ಕಾರಣ ಎಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಮೀನುಗಾರಿಕೆ ಇಲಾಖೆ ಕರಾವಳಿ ರಕ್ಷಣಾ ಪಡೆಯ ಸಹಯೋಗದಲ್ಲಿ ಲೈಟ್ ಫಿಶಿಂಗ್ ಮಟ್ಟ ಹಾಕಲು ತೀವ್ರ ಕಾರ್ಯಾಚರಣೆ ಪ್ರಾರಂಭಿಸಿದೆ. ಈ ವರ್ಷ ಮಾರ್ಚ್‌ಗಾಗುವಾಗಲೇ ಮೀನಿನ ತೀವ್ರ ಬರ ಕಂಡುಬಂದಿದ್ದು, ಸಾಕಷ್ಟು ಮೀನು ದೊರೆಯದೆ ಹಾಕಿದ ಡೀಸೆಲ್‌ನ ಖರ್ಚು ಕೂಡ ಹುಟ್ಟುತ್ತಿಲ್ಲ ಎಂಬ ಕಾರಣಕ್ಕೆ ಆಳ ಸಮುದ್ರ ಮೀನುಗಾರಿಕೆಯ ಮೀನುಗಳೆಲ್ಲ ಅವಧಿಗಿಂತ ಮೂರು ತಿಂಗಳು ಮೊದಲೇ ದಡದಲ್ಲಿ ಲಂಗರು ಹಾಕಿವೆ. ಜೊತೆಗೆ ನಾಡ ಮೀನುಗಾರಿಕೆ ದೋಣಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ. ಇದರ ಪರಿಣಾಮವಾಗಿ ಸಿಗುವ ಅಲ್ಪಸ್ವಲ್ಪ ಮೀನಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೆಲೆ ಏರಿಕೆಯಾಗಿದ್ದು, ಮೀನಿನ ಸೀಸನ್‌ನಲ್ಲಿ ಈ ಪರಿ ಬೆಲೆಯಿಂದಾಗಿ ಮತ್ಸ್ಯಪ್ರಿಯರು ಕಂಗಾಲಾಗಿದ್ದಾರೆ.
ಮಾಮೂಲಿಯಾಗಿ ಮೇ ತಿಂಗಳ ಅಂತ್ಯದವರೆಗೆ ಮೀನುಗಾರಿಕೆ ನಡೆಸುತ್ತಿದ್ದ ನಾಡದೋಣಿ, ಸಾಂಪ್ರದಾಯಿಕ ಮೀನುಗಾರರು ಡಿಸೆಂಬರ್ ಅಂತ್ಯದಲ್ಲಿಯೇ ಮೀನುಗಾರಿಕೆ ಸ್ಥಗಿತಗೊಳಿಸಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಅವೈಜ್ಞಾನಿಕ ಮೀನುಗಾರಿಕೆ ಮತ್ತು ಲೈಟ್ ಫಿಶಿಂಗ್ ಕಾರಣ ಎಂದು ಮೀನುಗಾರರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ ಸದ್ಯ ಕಾರ್ಯಾಚರಣೆಗಾಗಿ ಎರಡು ಎರಡು ಸ್ಪೀಡ್ ಬೋಟ್‌ಗಳನ್ನು ಇಳಿಸಿದೆ.
ಆಳ ಸಮುದ್ರದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಮೀನುಗಾರಿಕೆಯಿಂದ ಮೀನಿನ ಸಂತತಿ ಕಡಿಮೆಯಾಗುತ್ತಿದೆ. ಲೈಟ್‌ಫೀಶಿಂಗ್‌ಗೆ ನಿಷೇಧವಿದ್ದರೂ ಆಳ ಸಮುದ್ರದಲ್ಲಿ ರಾಜಾರೋಷವಾಗಿ ಲೈಟ್‌ಫಿಶಿಂಗ್ ನಡೆಯುತ್ತಿದೆ. ಈ ರೀತಿಯ ಮೀನುಗಾರಿಕೆಯಿಂದ ದೊಡ್ಡ ಮೀನುಗಳ ಜೊತೆ ಸಣ್ಣ ಮೀನುಗಳು ಕೂಡ ಭಾರಿ ಪ್ರಮಾಣದಲ್ಲಿ ಬಲೆಗೆ ಬೀಳುತ್ತವೆ. ಇದರಿಂದ ಕ್ರಮೇಣ ಮೀನಿನ ಸಂತಿತಿ ನಾಶವಾಗುತ್ತಿದೆ. ಈ ಬಗ್ಗೆ ಹಿಂದೆ ಸಾಕಷ್ಟು ಬಾರಿ ನಾಡ ದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರು ಪ್ರತಿಭಟನೆಯನ್ನು ನಡೆಸಿದ್ದರು. ಮೀನುಗಾರಿಕಾ ಸಚಿವರಿಗೂ ಮನವಿ ಮಾಡಿದರು. ಆದರೆ ಇದರಿಂದ ಯಾವುದೇ ಪ್ರಯೋಜನ ಮೀನುಗಾರರಿಗೆ ಆಗಿರಲಿಲ್ಲ.