ಸುನಿತಾ ವಿಲ್ಲಿಯಮ್ಸ್‌ ಪುನರಾಗಮನ : ಜಗತ್ತಿನಾದ್ಯಂತ ಮುಗಿಲು ಮುಟ್ಟಿದ ಹರ್ಷೋದ್ಗಾರ

45 ದಿನಗಳ ಚಿಕಿತ್ಸೆ ಬಳಿಕ ಹೊರ ಜಗತ್ತಿಗೆ ಕಾಲಿಡಲಿದ್ದಾರೆ ಗಗನಯಾತ್ರಿಗಳು

ನ್ಯೂಯಾರ್ಕ್‌: ಅಂತರಿಕ್ಷದಲ್ಲಿ 9 ತಿಂಗಳು ಕಳೆದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ವಾಪಸು ಕರೆತರುವ ಕಾರ್ಯಾಚರಣೆ ಕೊನೆಗೂ ಯಶ್ವಿಯಾಗಿ ಮುಗಿದಿದೆ. ನಾಸಾದ ಗಗನಯಾನಿಗಳಾದ ನಿಕ್ ಹೇಗ್ ಮತ್ತು ರಷ್ಯಾದ ಅಲೆಕ್ಸಾಂಡರ್ ಗೊರ್ಶನೋವ್ ಜೊತೆಗೂಡಿ ಸುನಿತಾ ಮತ್ತು ವಿಲ್ಮೋರ್ ಭಾರತೀಯ ಕಾಲಮಾನದ ಪ್ರಕಾರ ಇಂದು ನಸುಕಿನ ಹೊತ್ತು ಯಶಸ್ವಿಯಾಗಿ ಭೂಮಿಗೆ ಬಂದಿದ್ದಾರೆ.
ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 10.35ಕ್ಕೆ ಸರಿಯಾಗಿ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ಕ್ರೂ ಡ್ರ್ಯಾಗನ್‌ ಗಗನನೌಕೆ 17 ಗಂಟೆಗಳ ಪ್ರಯಾಣ ಮಾಡಿ ಬುಧವಾರ ಬೆಳಗ್ಗೆ 3:27ಕ್ಕೆ ಸರಿಯಾಗಿ ಫ್ಲೋರಿಡಾ ಕರಾವಳಿ ಸಮೀಪ ಸಮುದ್ರದಲ್ಲಿ ಲ್ಯಾಂಡ್ ಆಗಿದೆ. ಇಡೀ ಕಾರ್ಯಾಚರಣೆಯನ್ನು ನಾಸಾ ಲೈವ್‌ ಆಗಿ ಬಿತ್ತರಿಸಿದ್ದು, ಜಗತ್ತಿನಾದ್ಯಂತ ಕೋಟಿಗಟ್ಟಲೆ ಜನ ಇದನ್ನು ವೀಕ್ಷಿಸಿ ಗಗನಯಾತ್ರಿಗಳನ್ನು ಹೊತ್ತ ಗಗನನೌಕೆ ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಯುತ್ತಿದ್ದಂತೆ ಹರ್ಷೋದ್ಗಾರ ಮಾಡಿ ಸ್ವಾಗತಿಸಿದ್ದಾರೆ. ಭಾರತೀಯರೂ ಭಾರತೀಯ ಸಂಜಾತೆಯಾಗಿರುವ ಸುನಿತಾ ವಿಲ್ಲಿಯಮ್ಸ್‌ ಅಲ್ಲ ಅಪಾಯಗಳನ್ನು ದಾಟಿ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಂತೂ ಸಂತೋಷ ಮುಗಿಲುಮುಟ್ಟಿದೆ.

ಅಂತರಿಕ್ಷದಲ್ಲಿ ಬಾಕಿಯಾಗಿದ್ದ ಸುನಿತಾ ವಿಲ್ಲಿಯಮ್ಸ್‌ ಅವರನ್ನು ವಾಪಸು ಕರೆತರುತ್ತೇವೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭರವಸೆ ನೀಡಿದ್ದರು. ನಮ್ಮ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಗಗನನೌಕೆ ಸುರಕ್ಷಿತವಾಗಿ ಇಳೀದ ಬೆನ್ನಿಗೆ ಶ್ವೇತ ಭವನದ ಪ್ರಕಟಣೆ ಹೇಳಿದೆ.
ಗಗನ ನೌಕೆಯಿಂದ ಹೊರ ಬಂದ ಯಾನಿಗಳನ್ನು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಸಾಗಿಸಲಾಗಿದೆ. ಅಲ್ಲಿ ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ. ಗಗನಯಾತ್ರಿಗಳು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.
ಗಗನಯಾತ್ರಿಗಳಿಗೆ ನಾಸಾ 45 ದಿನಗಳ ರಿಹ್ಯಾಬಿಲಿಟೇಶನ್‌ ಯೋಜನೆ ರೂಪಿಸಿದೆ. 45 ದಿನಗಳಲ್ಲಿ ದೇಹದ ಚಟುವಟಿಕೆ ಮತ್ತು ಆರೋಗ್ಯ ಪರೀಕ್ಷೆಗಳನ್ನು ಗಗನಯಾತ್ರಿಗಳಿಗೆ ಮಾಡಲಾಗುತ್ತದೆ. ಭೂಮಿಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಅವಕಾಶ ನೀಡಲಾಗುತ್ತದೆ. ನೆಲದ ಮೇಲೆ ನಡೆಯಲು ಸಹಾಯ, ಆಹಾರ, ಅಗತ್ಯ ಔಷಧಗಳನ್ನು ಒದಗಿಸುವುದು, ಕಾಲುಗಳನ್ನು ಬಲಪಡಿಸುವ ವ್ಯಾಯಾಮ, ಕಾಲುಗಳು ತಮ್ಮ ನಿಯಂತ್ರಣಕ್ಕೆ ಬರುವವರೆಗೂ ವೈದ್ಯಕೀಯ ಮೇಲ್ವಿಚಾರಣೆ ನಡೆಯಲಿದೆ.

































 
 

ಅಂತರಿಕ್ಷದಲ್ಲಿ ಗುರುತ್ವಾಕರ್ಷಣೆ ಬಲ ಇಲ್ಲದ ಕಾರಣ ದೇಹದಲ್ಲಿ ಕೆಲ ಬದಲಾವಣೆ ಆಗುತ್ತದೆ. ದೇಹ ಭಾರವಿಲ್ಲ ಎನ್ನುವಂತೆ ಅನಿಸುತ್ತದೆ. ಜೊತೆಗೆ ದೇಹದ ತ್ವಚೆ ಮೊದಲಿನಂತೆ ಇರುವುದಿಲ್ಲ ಸ್ನಾಯು, ಮೂಳೆಗಳ ಸಾಂದ್ರತೆ ಶೇ.30ರಷ್ಟು ಕ್ಷೀಣಿಸುತ್ತದೆ. ಮೂಳೆಗಳು ಬಲ ಮತ್ತು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ಈ ಕಾರಣಗಳಿಂದ ಗಗನಯಾನಿಗಳು ಮೂಳೆ ಮುರಿತದ ಸಮಸ್ಯೆ ಎದುರಿಸುತ್ತಾರೆ.
ಶೂನ್ಯ ಗುರುತ್ವಾಕರ್ಷಣೆ ಮತ್ತು ಹೆಚ್ಚಿನ ವಿಕಿರಣದಲ್ಲಿ ದೀರ್ಘಕಾಲ ಬಾಹ್ಯಾಕಾಶದಲ್ಲಿ ಕಾಲ ಕಳೆದಿದ್ದರಿಂದ ಮೂಳೆಗಳ ದೌರ್ಬಲ್ಯ, ದೃಷ್ಟಿಯ ಮೇಲೆ ಪರಿಣಾಮ ಉಂಟಾಗಬಹುದು. ವಿಕಿರಣವು ಕ್ಯಾನ್ಸರ್ ಮತ್ತು ನರಮಂಡಲದ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಬಹುದು.
ಭೂಮಿಗೆ ವಾಪಸ್ ಆದ ತಕ್ಷಣ ಗಗನಯಾನಿಗಳಿಗೆ ನಡೆದಾಡಲು ಆಗುವುದಿಲ್ಲ. ಕೆಲವು ಕಾಲ ನಿಂತುಕೊಳ್ಳಲೂ ಸಮಸ್ಯೆ ಆಗಲಿದೆ. ಅಧಿಕ ರೇಡಿಯೇಷನ್ ಕಾರಣ ಕ್ಯಾನ್ಸರ್ ಭೀತಿ, ಡಿಎನ್‌ಎಗೆ ಹಾನಿಯಯಾಗುವ ಸಾಧ್ಯತೆಯಿದೆ. ಒಂಟಿತನ, ಮಾನಸಿಕ ಒತ್ತಡ, ನಿದ್ರಾಹೀನತೆ, ದೃಷ್ಟಿ ಕೇಂದ್ರೀಕರಿಸಲು ಸಮಸ್ಯೆ ಅನುಭವಿಸುತ್ತಾರೆ. ಈ ಎಲ್ಲವುಗಳಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top