ಪ್ರಭಾವಿ ಸಚಿವರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ಇನ್ನೋರ್ವ ಸಚಿವರಿಂದ ಪ್ರಯತ್ನ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಹನಿಟ್ರ್ಯಾಪ್ ಗುಸುಗುಸು ಕೇಳಿಸಲಾರಂಭಿಸಿದೆ. ಪ್ರಭಾವಿ ಸಚಿವರೊಬ್ಬರು ಹನಿಟ್ರ್ಯಾಪ್ ಖೆಡ್ಡಾದಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ತುಮಕೂರು ಕಡೆಯ ಸಚಿವರನ್ನು ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಿ ಮಟ್ಟ ಹಾಕಲು ಪ್ರಯತ್ನಿಸಲಾಗಿದೆ. ಈ ಹನಿಟ್ರ್ಯಾಪ್ ಜಾಲ ಹೆಣೆದಿರುವುದು ಕಾಂಗ್ರೆಸಿನವರೇ ಆದ ಇನ್ನೊಬ್ಬ ಪ್ರಭಾವಿ ಸಚಿವರು ಎಂಬ ವದಂತಿಗಳು ಕಳೆದ ಎರಡು ದಿನಗಳಿಂದ ಹರಿದಾಡುತ್ತಿವೆ.
ಕೆಲ ದಿನಗಳಿಂದ ತೆರೆಮರೆಯಲ್ಲಿ ನಡೆಯುತ್ತಿದ್ದ ಹನಿಟ್ರ್ಯಾಪ್ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ಪ್ರಭಾವಿ ಸಚಿವರನ್ನೇ ಹನಿಟ್ರ್ಯಾಪ್ ಬಲೆಗೆ ಕೆಡವಲು ಪ್ರಯತ್ನಪಟ್ಟಿದ್ದಾರೆ. ತುಮಕೂರು ಮೂಲದ ಸಚಿವರನ್ನು ಹನಿಟ್ರ್ಯಾಪ್ ಮಾಡುವುದಕ್ಕೆ ಯತ್ನಿಸಲಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ಈಗ ಬೂದಿ ಮುಚ್ಚಿದ ಕೆಂಡದಂತೆ ಇದೆ ಎಂದಿತ್ಯಾದಿ ಮಾತುಗಳು ಕೇಳಿಬರುತ್ತಿವೆ. ಹನಿಟ್ರ್ಯಾಪ್ ಯತ್ನ ನಡೆದಿದ್ದು ವಿಧಾನಸೌಧದ ಅಸುಪಾಸಿನಲ್ಲೇ ಎನ್ನಲಾಗುತ್ತಿದೆ. ಸಚಿವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಹಿಂದೆ ಅದರದ್ದೇ ಪಕ್ಷದ ಪ್ರಭಾವಿ ನಾಯಕನ ಕೈವಾಡ ಇರುವ ವದಂತಿ ದಟ್ಟವಾಗಿ ಹರಿದಾಡುತ್ತಿದೆ. ಕೆಲ ಹೆಸರುಗಳು ಕೂಡ ಚರ್ಚೆಯಾಗುತ್ತಿವೆ. ಆದರೆ ಯಾರು, ಯಾಕೆ ಹನಿಟ್ರ್ಯಾಪ್ ಮಾಡಿದ್ದಾರೆ? ಯಾರು ಮಾಡಿಸಲು ಯತ್ನಿಸಿದ್ದರು ಎನ್ನುವುದು ಗೊತ್ತಿದ್ದರೂ ಅದನ್ನು ಯಾರೂ ಬಾಯಿ ಬಿಡುತ್ತಿಲ್ಲ. ಈ ಬಗ್ಗೆ ಎಲ್ಲೂ ಯಾರೂ ಕೂಡ ಮಾತನಾಡಿಲ್ಲ. ದೂರು ಕೂಡ ದಾಖಲಾಗಿಲ್ಲ. ಇನ್ನು ತಮ್ಮನ್ನು ಹನಿಟ್ರ್ಯಾಪ್ ಮಾಡಲು ಪ್ರಯತ್ನಿಸಿರುವ ಬಗ್ಗೆ ಸಚಿವರು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದ್ದು, ಇದು ರಾಜ್ಯ ಕಾಂಗ್ರೆಸ್ನಲ್ಲಿ ಭಾರಿ ಸಂಚಲನ ಮೂಡಿಸಿದೆ.
ತಮ್ಮದೇ ಪಕ್ಷದ ಪ್ರಭಾವಿ ನಾಯಕ ಸಚಿವರೊಬ್ಬರನ್ನು ಹನಿಟ್ರ್ಯಾಪ್‌ಗೆ ಬೀಳಿಸಲು ಪ್ರಯತ್ನ ನಡೆಸಲಾಗಿದೆ ಎಂಬುದು ಕಾಂಗ್ರೆಸ್ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಈ ಸಂಬಂಧ ವಿಧಾನಸೌಧದ ಮೊಗಸಾಲೆಯಲ್ಲೂ ಶಾಸಕರು-ಸಚಿವರ ನಡುವೆ ಗುಸುಗುಸು ಚರ್ಚೆಗಳು ನಡೆಯುತ್ತಿವೆ. ಸಚಿವ ಬೈರತಿ ಸುರೇಶ್ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಹನಿಟ್ರ್ಯಾಪ್ ಮಾಡುವವರಿಗೆ ಯಾವುದೇ ಕ್ಷಮೆ ಇಲ್ಲ. ಯಾರಾದರೂ ಹನಿಟ್ರ್ಯಾಪ್ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಇದುವರೆಗೂ ಯಾವುದೇ ಹನಿಟ್ರ್ಯಾಪ್ ನಡೆದಿಲ್ಲ. ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಪೊಲೀಸರು ನೋಡಿಕೊಳ್ಳುತ್ತಾರೆ ಎಂದಿದ್ದಾರೆ.
ಸುಸಂಸ್ಕೃತ ರಾಜ್ಯಕ್ಕೆ ಸಿಡಿ ಯೂನಿಟ್‌ನಿಂದ ಕೆಟ್ಟ ಹೆಸರು ಬಂದಿದೆ. ಸಿಡಿ ರಾಜಕಾರಣ ಮಾಡೋರಿಗೆ ಛೀಮಾರಿ ಹಾಕಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಅಕ್ರೋಶ ಹೊರಹಾಕಿದ್ದಾರೆ. ದುರ್ದೈವವೆಂದರೆ ಇದು ಕೆಲವರಿಗೆ ಉದ್ಯೋಗ ಆಗಿದೆ. ಇದು ಸರಿ ಅಲ್ಲ ಎಂದು ಸಚಿವ ಆರ್.ಬಿ ತಿಮ್ಮಾಪುರ ಬೇಸರ ವ್ಯಕ್ತಪಡಿಸಿದ್ದಾರೆ.