ಬಿಕ್ಷಾಟನೆ ನಿರ್ಮೂಲನೆ ಹಾಗೂ ಭಿಕ್ಷುಕರ ಪುನರ್ವಸತಿ ಕುರಿತಾಗಿ ಆಗ್ರಹಿಸಿದ ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು : ಬಿಕ್ಷಾಟನೆ ನಿರ್ಮೂಲನೆ ಹಾಗೂ ಭಿಕ್ಷುಕರ ಪುನರ್ವಸತಿ ಕುರಿತಾಗಿ ಎಂ.ಎಲ್‍.ಸಿ ಕಿಶೋರ್ ಕುಮಾರ್ ಪುತ್ತೂರು ಮಾ.18(ಇಂದು) ವಿಧಾನ ಪರಿಷತ್‍ ನಲ್ಲಿ ಧ್ವನಿ ಎತ್ತಿದ್ದಾರೆ.

ಮಾ. 17 2025 ರ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ “ಭಿಕ್ಷಾಟನೆ : 306 ಮಕ್ಕಳ ರಕ್ಷಣೆ” ಕೈಗೂಡದ ದಶಕಗಳ ಪ್ರಯತ್ನ ಎಂಬ ಶಿರೋನಾಮೆಯಡಿ ಬಂದಿರುವ ವರದಿಯನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ,  ಈ ವರದಿಯ ಪ್ರಕಾರ ಕಳೆದ ಏಪ್ರಿಲ್ ನಿಂದ  ಡಿಸೆಂಬರ್ ತಿಂಗಳ (2024 – 25ರ ತನಕ 206  ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಲಾಗಿದೆ.  ಆದರೆ ಇಂದು ನಗರ ಹಾಗು ಪಟ್ಟಣ ಪ್ರದೇಶಗಳ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಬಾಲ ಭಿಕ್ಷುಕರ ಸಂಖೆಯು ಹೆಚ್ಚಾಗಿದ್ದು ರಸ್ತೆಯ ಅಪಘಾತ ಹಾಗು ಕಳ್ಳತನಕ್ಕೂ (ಸರಗಳ್ಳರು)ಇದು ದಾರಿಯನ್ನು ಒದಗಿಸುತ್ತಿದೆಯೆಂಬುವುದನ್ನು ಈ ವೇಳೆಯಲ್ಲಿ ಗಮನ ಸೆಳೆಯಲು ಬಯುಸುತ್ತೇನೆ.  ರಾಜ್ಯವು ಭಿಕ್ಷಾಟನೆ ಮುಕ್ತ ಎನ್ನುವ ಹಣೆಪಟ್ಟಿಕಟ್ಟಿದ್ದರೂ, ಕಣ್ಣಿದ್ದು ಕಾಣದ ಕುರುಡರಂತೆ ವರ್ತಿಸುವುದು ಎಷ್ಟು ಸರಿ. ಕಲ್ಯಾಣ ಯೋಜನೆಯ ಪ್ರಮುಖ ಉದ್ದೇಶವೇ ಸಮಾಜದ ಅತ್ಯಂತ ನಿರ್ಗತಿಕರಿಗೆ ಕನಿಷ್ಠ ಸೌಲಭ್ಯವನ್ನು ಒದಗಿಸುವುದಾಗಿದೆ. ಹಾಗಿದ್ದರೆ ದಿನೇ ದಿನೇ ಹೆಚ್ಚುತಿರುವ ಬಾಲ ಭಿಕ್ಷುಕರ ಸಂಖೇಗೆ  ಯಾರು ಹೊಣೆ? ರಾಜ್ಯದ ಕಲ್ಯಾಣಕ್ಕಾಗಿ ಪ್ರತಿ ವರ್ಷ ಲಕ್ಷಾಂತರ ಹಣವನ್ನು ಸರಕಾರವು ವ್ಯಯಿಸುತ್ತಿದೆಯಾದರೂ ಸರಕಾರ ಜನ ಸಾಮಾನ್ಯರಿಗೆ ಅಗತ್ಯ ಸೌಲಭ್ಯವನ್ನು ಒದಗಿಸುವಲ್ಲಿ ಸೋತಿದೆ ಎನ್ನುವುದು ನಗರದಲ್ಲಿ ಹೆಚ್ಚುತ್ತಿರುವ ಭಿಕ್ಷಾಟಕರನ್ನು ಕಂಡಾಗ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.  ಸರಕಾರ ಶಾಲೆಗಳಲ್ಲಿ ಉಚಿತ ಶಿಕ್ಷಣದ ಜೊತೆ ಅಗತ್ಯ ಪೌಷ್ಟಿಕ ಆಹಾರದ ಸೌಲಭ್ಯವನ್ನು ಒದಗಿಸಿದ್ದರೂ, ರಸ್ತೆಯ ಇಕ್ಕೆಲಗಳಲ್ಲಿ ಬಾಲ ಭಿಕ್ಷುಕರು ಹೆಚ್ಚಾಗುತ್ತಿದ್ದಾರೆ ಎಂದರೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ ಎಂದರ್ಥ.  ಈ ನಿಟ್ಟಿನಿಂದ ಮೊದಲಿಗೆ ಸರಕಾರಿ ಶಾಲೆಗಳ ಮಕ್ಕಳ  ಹೊರಗುಳಿಯುವಿಕೆ (ಡ್ರಾಪ್ ಔಟ್)ವಿಷಯದಲ್ಲಿ ಗಮನಹರಿಸಿದೆಯೆಂದಾದಲ್ಲಿ ಹಾಗೂ ಕಲ್ಯಾಣ ಯೋಜನೆಯ ಮುಖಾಂತರ ಸಾಮಾನ್ಯರಿಗೆ ಕನಿಷ್ಠ ಮೂಲ ಸೌಕರ್ಯವನ್ನು ಒದಗಿಸಿದಲ್ಲಿ ಈ ಸಮಸ್ಯೆಯನ್ನು ಸರಿದೂಗಿಸಬಹುದು.  ಹೊಟ್ಟೆಪಾಡಿನ ಭಿಕ್ಷಾಟನೆ ಇಂದು ಪಟ್ಟಣಗಳಲ್ಲಿ hightech ವೃತ್ತಿಯಾಗಿ ಬದಲಾಗಿರುದನ್ನು , ಈ ವೃತ್ತಿಗಾಗಿ ಮಕ್ಕಳ ಕಳ್ಳಸಾಗಣಿಕೆ ಹೆಚ್ಚಾಗಿರುವುದನ್ನು ನಾವು ಗಮನಿಸಬಹುದು ಇದನ್ನು ಬುಡ ಸಹಿತ ಕಿತ್ತು ಎಸೆದಿಲ್ಲ ಎಂದಾದರೆ ಕೊಲೆ, ಕಳ್ಳತನ , ದರೋಡೆಗಳಿಗೆ ಮುಂದೊಂದು ದಿನ ನಾವು ಉತ್ತರವನ್ನು ನೀಡುವಲ್ಲಿ ಸೋಲಬಹುದು . ಸರಕಾರ ಕಲ್ಯಾಣ ಯೋಜನೆಯ ಮೂಲಕ ಕನಿಷ್ಟ ಸೌಲಭ್ಯವನ್ನು ಸಾಮಾನ್ಯರಿಗೆ ಒದಗಿಸಿಕೊಡಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರ ಭಿಕ್ಷಾಟನೆ ನಿರ್ಮೂಲನೆ ಮತ್ತು ಭಿಕ್ಷುಕರ ಪುನರ್ವಸತಿಗೆ ಕೋಟ್ಯಾಂತರ ಹಣ ವ್ಯಯ ಮಾಡುತ್ತಿದ್ದರೂ ದಶಕಗಳ ಪ್ರಯತ್ನದ ನಂತರವೂ ಭಿಕ್ಷಾಟನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಲಾಗಿದೆ. ಬಡವರಿಗಾಗಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರೂ, ನಗರ ಮತ್ತು ಪಟ್ಟಣಗಳಲ್ಲಿ ಇಂದಿಗೂ ಪುರುಷರು-ಮಹಿಳೆಯರು ಮಾತ್ರವಲ್ಲದೆ ಮಕ್ಕಳೂ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಇದು ಸಾರ್ವಜನಿಕರಿಗೆ ಕಿರಿಕಿರಿಯಾಗಿದ್ದರೆ, ಸರ್ಕಾರ ಜಾರಿಗೆ ತಂದಿರುವ ಕಲ್ಯಾಣ ಕಾರ್ಯಕ್ರಮಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಕನಿಷ್ಠ ಸೌಲಭ್ಯ ಕಲ್ಪಿಸಲೂ ಸೋತಿರುವುದರ ಸಂಕೇತವಾಗಿದೆ. ರಾಜ್ಯಾದ್ಯಂತ ಕಳೆದ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ಭಿಕ್ಷಾಟನೆಯಲ್ಲಿ ತೊಡಗಿದ್ದ 306 ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಒಪ್ಪಿಸಲಾಗಿದೆ ಎಂದು ವರದಿ ಹೇಳುತ್ತಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಭಿಕ್ಷಾಟನೆ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಬಡತನ, ಅನಕ್ಷರತೆ, ಅಂಗವೈಕಲ್ಯ, ಪಾಲಕರು-ಪೋಷಕರ ಸಾವು, ಕೆಲಸಕ್ಕಾಗಿ ಅಲೆದು ಸುಸ್ತಾದವರು ತಾವು ಬದುಕಲು ಈ ಮಾರ್ಗ ಅನುಸರಿಸಿದ್ದು, ಇದು ಕೆಲವರಿಗೆ ಅನಿವಾರ್ಯವಾಗಿದ್ದರೆ ಇನ್ನೂ ಕೆಲವರಿಗೆ ವೃತ್ತಿಯಾಗಿ ಮಾರ್ಪಾಡಾಗಿದೆ.































 
 

ಸರ್ಕಾರ ತಕ್ಷಣ ಭಿಕ್ಷಾಟನೆ ನಿರ್ಮೂಲನೆಗೆ ಸಕಲ ಕ್ರಮ ಕೈಗೊಳ್ಳವುದರ ಜೊತೆಗೆ ಭಿಕ್ಷುಕರ ಪುನರ್ವಸತಿಗೆ ಮತ್ತು ಅವರಿಗಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಲು ಅಗತ್ಯವಿರುವ ಅನುದಾನವನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top