ಪುತ್ತೂರು : ಆರ್ಯಾಪು ಗ್ರಾಮದ ಕಾರ್ಪಾಡಿ ಬೈಲಿನ ಮನೆ ಪಕ್ಕದ ದನದ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡು, ಉರಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಮೋಹನ್ ಭಂಡಾರಿ ಎಂಬವರ ಮನೆ ಇದಾಗಿದ್ದು, ಘಟನೆ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಹೇಳಲಾಗಿದೆ.
ಮನೆ ಪಕ್ಕದಲ್ಲೇ ಇದ್ದ ಹಟ್ಟಿಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಸ್ಥಳಕ್ಕಾಗಮಿಸಿದ ನೆರೆಮನೆಯವರು ತಕ್ಷಣ ಜಾಗೃತರಾಗಿ ದನಗಳನ್ನು ಹೊರ ಕರೆದೊಯ್ದಿದ್ದಾರೆ. ಆದರೆ ಬೆಂಕಿ ಆರಿಸಲು ಹರಸಾಹಸ ಪಟ್ಟ ಘಟನೆ ಮಾತ್ರ ಅರಣ್ಯ ರೋಧನವಾಯಿತು. ಕಾರ್ಪಾಡಿ ದೇವಸ್ಥಾನದ ಮಗ್ಗುಲಲ್ಲೇ ಇರುವ ಆರ್ಯಾಪು ಬೈಲಿನ ಕೆಲ ಮನೆಗಳಿಗೆ ಇಂದೂ ಕೂಡ ರಸ್ತೆ ಇಲ್ಲ. ಕಳೆದ ಹಲ ವರ್ಷಗಳಿಂದ ರಸ್ತೆಗಾಗಿ ನಡೆಸುತ್ತಿರುವ ಹೋರಾಟಕ್ಕೆ ಯಾರೂ ಬೆಲೆ ನೀಡಿಲ್ಲ. ಮನೆ ಹಿರಿಯರು ಅನಾರೋಗ್ಯಕ್ಕೆ ತುತ್ತಾದಾಗಲೂ ಎತ್ತಿಕೊಂಡು ಹೋಗಿ ಆಸ್ಪತ್ರೆ ಸೇರಿಸಿದ ಉದಾಹರಣೆ ಇಲ್ಲಿದೆ. ಇದೀಗ ದನದ ಕೊಟ್ಟಿಗೆಗೆ ಬೆಂಕಿ ಬಿದ್ದಿದ್ದು, ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಶಮನ ಮಾಡಲು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಕೆಲವೇ ಕ್ಷಣದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಜರಾದರು. ಆದರೇನು ಮಾಡುವುದು. ದೇವಳದವರೆಗೆ ಬಂದ ಸಿಬ್ಬಂದಿ, ರಸ್ತೆ ಇಲ್ಲದ ಪರಿಸ್ಥಿತಿ ಕಂಡು ಹೌಹಾರಿದರು. ಆದರೇನು ಮಾಡುವುದು ಬೆಂಕಿ ಆರಿಸಲು ರಸ್ತೆ ಬೇಕೇ ಬೇಕೆಂದು ಪಟ್ಟು ಹಿಡಿದು ಕೂರುವಂತಿಲ್ಲ. ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಿ, ಹೇಗೋ ಬೆಂಕಿ ಆರಿಸಲಾಯಿತು. ಸ್ಥಳೀಯರು ಕೈಗೂಡಿಸಿದರು. ಇಂತಹ ಘಟನೆಗಳಿಂದ ಪರಿಸ್ಥಿತಿ ಇನ್ನಷ್ಟು ಅತಿರೇಕಕ್ಕೆ ಹೋಗುವ ಮೊದಲು ಅಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಯೋನ್ಮುಖರಾದರೆ ಒಳಿತು. ಮೂಲಸೌಕರ್ಯಗಳಲ್ಲಿ ಒಂದಾದ ರಸ್ತೆ ನಿರ್ಮಾಣವಾದರೆ ಈ ಭಾಗದ ಅನೇಕ ಮನೆಗಳವರು ನಿಟ್ಟುಸಿರು ಬಿಟ್ಟಾರು. ಸುಮಾರು 3 ಲಕ್ಷ ರೂ. ನಷ್ಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಮನೆಯವರು ಅಂದಾಜಿಸಿದ್ದಾರೆ.