ಹಿಂಸಾಚಾರಕ್ಕೆ ಮೊದಲೇ ತಯಾರಿ ನಡೆದಿತ್ತು ಎಂದು ಬಿಜೆಪಿ ಆರೋಪ
ಮುಂಬಯಿ: ಆರ್‌ಎಸ್‌ಎಸ್ ಕೇಂದ್ರ ಕಚೇರಿಯಿರುವ ನಾಗಪುರ ನಗರದ ಮಹಲ್‌ನಲ್ಲಿ ನಿನ್ನೆ ತಡರಾತ್ರಿ ನಡೆದಿರುವ ಕೋಮು ಹಿಂಸಾಚಾರ ಪೂರ್ವ ನಿಯೋಜಿತ ಎಂದು ಬಿಜೆಪಿ ಆರೋಪಿಸಿದೆ. ಹಿಂದುಗಳ ಅಂಗಡಿ, ಮನೆ ಮತ್ತು ವಾಹನಗಳನ್ನು ಗುರಿಮಾಡಿಕೊಂಡು ದಾಳಿ ಮಾಡಲಾಗಿದೆ. ಇದಕ್ಕೂ ಮೊದಲು ಈ ಭಾಗದಲ್ಲಿರುವ ಎಲ್ಲ ಸಿಸಿಟಿವಿಗಳನ್ನು ಧ್ವಂಸ ಮಾಡಿದ್ದಾರೆ. ಭಾರಿ ಪ್ರಮಾಣದಲ್ಲಿ ಕಲ್ಲು ತೂರಾಟವಾಗಿದ್ದು ಪೊಲೀಸರ ಸಹಿತ ಅನೇಕ ಮಂದಿ ಗಾಯಗೊಂಡಿದ್ದಾರೆ. ಇವೆಲ್ಲ ಪೂರ್ವ ನಿಯೋಜಿತ ಕೃತ್ಯ. ಗಲಭೆಗೆ ಮೊದಲೇ ತಯಾರಿ ಮಾಡಿಕೊಳ್ಳಲಾಗಿತ್ತು ಎಂದು ನಾಗಪುರದ ಬಿಜೆಪಿ ಶಾಸಕ ಪ್ರವೀಣ್ ದಾಟ್ಕೆ ಹೇಳಿದ್ದಾರೆ.

ಮೊಗಲ ದೊರೆ ಔರಂಗಜೇಬನ ಗೋರಿಯನ್ನು ನೆಲಸಮ ಮಾಡಬೇಕೆಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್, ಬಜರಂಗ ದಳ ಮತ್ತಿತರ ಹಿಂದು ಸಂಘಟನೆಗಳು ನಿನ್ನೆ ಬೆಳಗ್ಗೆ ಮಹಲ್‌ನಲ್ಲಿ ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭದಲ್ಲಿ ಔರಂಗಜೇಬನ ಭಾವಚಿತ್ರವನ್ನು ಸಾಂಕೇತಿಕವಾಗಿ ಸುಡಲಾಗಿತ್ತು. ಇದನ್ನು ಕುರಾನ್ ಪುಸ್ತಕವನ್ನು ಸುಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ವದಂತಿಗಳು ಹರಿದಾಡಿದ ಬಳಿಕ ಪರಿಸ್ಥಿತಿ ಪ್ರಕ್ಷುಬ್ಧವಾಗಿತ್ತು. ರಾತ್ರಿ 7.30ರ ಹೊತ್ತಿಗೆ ಗುಂಪೊಂದು ಮಹಲ್‌ನ ಚಿಟ್ನಿಸ್ ಪಾರ್ಕ್ ಎಂಬಲ್ಲಿ ಏಕಾಏಕಿ ದಾಂಧಲೆ ಮತ್ತು ಹಿಂಸಾಚಾರಕ್ಕೆ ತೊಡಗಿದ್ದು, ಕಂಡ ಕಂಡ ವಾಹನಗಳಿಗೆ ಬೆಂಕಿಹಚ್ಚಿ ಕಲ್ಲು ತೂರಾಟ ನಡೆಸಿದೆ.
ಹಳೆ ಭಂಡಾರ ರಸ್ತೆಯ ಹನ್ಸಪುರಿ ಎಂಬಲ್ಲಿ ರಾತ್ರಿ 11 ಗಂಟೆ ವೇಳೆಗೆ ಇನ್ನೊಂದು ಸುತ್ತಿನ ಹಿಂಸಾಚಾರ ಸ್ಫೋಟಗೊಂಡಿದ್ದು, ಇಲ್ಲೂ ವ್ಯಾಪಕಾವಾಗಿ ಕಲ್ಲು ತೂರಾಟ ಮತ್ತು ಕಿಚ್ಚಿಕ್ಕುವ ಘಟನೆಗಳು ನಡೆದಿವೆ. ಪೊಲೀಸರು ಲಾಠಿ ಚಾರ್ಜ್ ಮಾಡಿ ಮತ್ತು ಅಶ್ರುವಾಯು ಸಿಡಿಸಿ ಗಲಭೆಕೋರರನ್ನು ಚದುರಿಸಿದ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಹೇರಲಾಗಿದೆ. ಸುಮಾರು 60 ಮಂದಿಯನ್ನು ಪೊಲೀಸರು ಗಲಭೆಗೆ ಸಂಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಸೈಬರ್ ಪೊಲೀಸರು ಸುಳ್ಳು ಮಾಹಿತಿ ಹರಡಿದ 100 ಅಧಿಕ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ವಿರುದ್ಧ ತನಿಖೆ ಪ್ರಾರಂಭಿಸಿದ್ದಾರೆ. ಗಲಭೆಯ ಹಳೆ ವೀಡಿಯೊಗಳನ್ನು ಹಂಚಿಕೊಂಡು ಗಲಭೆಗೆ ಕುಮ್ಮಕ್ಕು ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಾಗಪುರ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಅವರ ತವರು ಜಿಲ್ಲೆಯೂ ಆಗಿದೆ. ಪರಿಸ್ಥಿತಿ ಸೂಕ್ಷ್ಮವಾಗಿರುವುದು ಗೊತ್ತಿದ್ದೂ ಮುನ್ನೆಚ್ಚರಿಕೆ ವಹಿಸದೆ ಇರುವುದು ಗಲಭೆಗೆ ಕಾರಣ ಎಂದು ವಿಪಕ್ಷಗಳು ಸರಕಾರವನ್ನು ಟೀಕಿಸಿವೆ. ಬಹುಜನ ಸಮಾಜ ಪಕ್ಷ, ಶಿವಸೇನೆ ಉದ್ಧವ ಬಣ, ಕಾಂಗ್ರೆಸ್ ಸಿಕ್ಕಿದ ಅವಕಾಶವನ್ನು ಸರಕಾರ ಮತ್ತು ಆರ್‌ಎಸ್‌ಎಸ್‌ನ್ನು ಟೀಕಿಸಲು ಬಳಸಿಕೊಂಡಿವೆ.