ಹೋರಾಟಗಾರರ ಸಭೆಗೆ ಮತ್ತೊಮ್ಮೆ ಅನುಮತಿ ನಿರಾಕರಿಸಿದ ಪೊಲೀಸರು
ಮಂಗಳೂರು : ಕೆಲ ಸಮಯದಿಂದ ತಣ್ಣಗಾದಂತೆ ಕಾಣಿಸುತ್ತಿದ್ದ ಸೌಜನ್ಯಾ ಪರ ಹೋರಾಟ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಮೀರ್ ಎಂ.ಡಿ. ಎಂಬ ಯೂಟ್ಯೂಬರ್ ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂದು ಹೇಳಿಕೊಂಡು ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರನ್ನು ಗುರಿಯಾಗಿಸಿಕೊಂಡು ಮಾಡಿದ ವೀಡಿಯೊದಿಂದಾಗಿ ಮತ್ತೆ ಸೌಜನ್ಯಾ ಪ್ರಕರಣ ಜೀವ ಪಡೆದುಕೊಂಡಿದೆ.
39 ನಿಮಿಷ 8 ಸೆಕೆಂಡುಗಳ ಈ ವೀಡಿಯೊ ಆರಂಭದಲ್ಲಿ ಸಮೀರ್‌ನ ಚಾನೆಲ್‌ನಲ್ಲಿ ಮಾತ್ರ ಇತ್ತು ಹಾಗೂ ಮೊದಲ ನಾಲ್ಕು ದಿನ ತಕ್ಕಮಟ್ಟಕ್ಕೆ ವೀಕ್ಷಣೆ ಪಡೆದುಕೊಂಡಿತ್ತು. ಆದರೆ ಬಳಿಕ ಅಕ್ಷರಶಃ ವೈರಲ್ ಆಗಿದ್ದು, 1.25 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಬೇರೆ ಬೇರೆ ಚಾನಲ್‌ಗಳಲ್ಲಿ ಈ ವೀಡಿಯೊ ಮರು ಪೋಸ್ಟ್ ಆಗಿದ್ದು ಅಲ್ಲೂ ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಎಕ್ಸ್ ಮೊದಲಾದೆಡೆ ಈ ವೀಡಿಯೊದ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಹಲವು ಯೂಟ್ಯೂಬರ್‌ಗಳು, ರೀಲ್ಸ್ ಸ್ಟಾರ್‌ಗಳು, ಕಿರುತೆರೆ ನಟರೆಲ್ಲ ಈ ಬಗ್ಗೆ ಮಾತನಾಡಲು ಆರಂಭಿಸಿದ್ದು, 14 ವರ್ಷಗಳ ಹಿಂದಿನ ಪ್ರಕರಣ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ.
ವೀಡಿಯೊ ಸಾಕಷ್ಟು ಪರ ಮತ್ತು ವಿರೋಧಿ ಹೇಳಿಕೆಗಳಿಗೆ ಕಾರಣವಾಗಿದೆ. ಸಮೀರ್ ಎಂ.ಡಿ ಮತ್ತು ಸೌಜನ್ಯಾ ಹೋರಾಟದ ಮುಂಚೂಣಿಯಲ್ಲಿರುವವರನ್ನು ಗುರಿ ಮಾಡಿಕೊಂಡು ಮತ್ತೊಮ್ಮೆ ಅನೇಕ ವೀಡಿಯೊಗಳು ಹೊರಬಂದಿವೆ. ಇದಕ್ಕೆ ಪ್ರತಿಯಾಗಿ ಸೌಜನ್ಯಾ ಹೋರಾಟಗಾರರು ಕೂಡ ವೀಡಿಯೊ ಮತ್ತು ಹೇಳಿಕೆಗಳ ಮೂಲಕ ಎದಿರೇಟು ಕೊಡುತ್ತಿದ್ದಾರೆ. ಜೊತೆಗೆ ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸದ ಹಳೆ ವೀಡಿಯೊಗಳನ್ನೆಲ್ಲ ಕೆದಕಿ ಕೆದಕಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ.
ಈ ನಡುವೆ ಸೌಜನ್ಯಾ ಹೋರಾಟದ ಪರ ಇರುವವರು ಬೆಂಗಳೂರಿನಲ್ಲಿ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಲು ಮುಂದಾಗಿದ್ದರು. ಕೆಲದಿನಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಿಗದಿಯಾಗಿದ್ದ ಸಭೆಗೆ ಕೊನೇ ಕ್ಷಣದಲ್ಲಿ ಅನುಮತಿ ನಿರಾಕರಿಸಿದ ಕಾರಣ ಸಭೆಯನ್ನು ಮುಂದೂಡಲಾಗಿತ್ತು.
ಈಗ ಮತ್ತೊಮ್ಮೆ ಬೆಂಗಳೂರಿನ ಶೇಷಾದ್ರಿಪುರದ ಎಐಟಿಯುಸಿ ಸಭಾಂಗಣದಲ್ಲಿ ಮಾ.18ರಂದು ನಿಗದಿಯಾಗಿದ್ದ ಸಮಾಲೋಚನಾ ಸಭೆಗೆ ಅವಕಾಶ ನಿರಾಕರಿಸಿ ಪೊಲೀಸರು ನೊಟೀಸ್ ನೀಡಿದ್ದಾರೆ. ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಬೆಂಗಳೂರು ನಗರ ಪೊಲೀಸರು ನೊಟೀಸ್‌ನಲ್ಲಿ ಉಲ್ಲೇಖಿಸಿದ್ದಾರೆ.
ಸಾರಿಗೆ ನೌಕರರ ಹಿತ ರಕ್ಷಣಾ ವೇದಿಕೆಯ ನವೀನ್ ಶ್ರೀನಿವಾಸ್, ಕರ್ನಾಟಕ ರಣಧೀರ ಪಡೆಯ ಭೈರಪ್ಪ ಹರೀಶ್ ಕುಮಾರ್, ವಕೀಲರಾದ ಮೈತ್ರಿ ಎಂಬವರ ನೇತೃತ್ವದಲ್ಲಿ ಸೌಜನ್ಯ ನ್ಯಾಯಕ್ಕೆ ಆಗ್ರಹಿಸಿ, ಊಳಿಗೆಮಾನ್ಯ ದರ್ಪದ ವಿರುದ್ಧ-ಸಾಹಿತಿ ಚಿಂತಕರ ಹೋರಾಟದ ದಿಕ್ಕೂಚಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಮಾಜದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆ ಹೆಚ್ಚಾಗುತ್ತಿರುವ ಕುರಿತು ಮತ್ತು ಸೌಜನ್ಯಾ ಪ್ರಕರಣದ ಕಾನೂನು ಹೋರಾಟದ ರೂಪುರೇಷೆ ಚರ್ಚೆಯಾಗಲಿದೆ. ಈ ಸಭೆಯಲ್ಲಿ 40-50 ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ಪೊಲೀಸರು ಈ ಸಭೆಗೆ ತಡೆಯೊಡ್ಡಿದ್ದು, ಎಚ್ಚರಿಕೆ ಮೀರಿ ಸಭೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ನೋಟಿಸಿನಲ್ಲಿ ತಿಳಿಸಿದ್ದಾರೆ. ಸೌಜನ್ಯಾ ಪರ ಹೋರಾಟಗಾರರು ಯಾವ ಕಾರಣಕ್ಕೂ ಸಭೆ ರದ್ದಾಗುವುದಿಲ್ಲ ಎಂದು ಹೇಳಿದ್ದಾರೆ.
ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಎರಡನೇ ವರ್ಷದ ಪದವಿ ಪೂರ್ವ ವಿದ್ಯಾರ್ಥಿನಿ 17 ವರ್ಷದ ಸೌಜನ್ಯಾಳನ್ನು 2012ರ ಅಕ್ಟೋಬರ್ 9ರಂದು ಅತ್ಯಾಚಾರ ಮತ್ತು ಕೊಲೆ ಮಾಡಲಾಗಿತ್ತು. ಹದಿನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಈ ಅಪರಾಧ ಕೃತ್ಯ ಹೈಕೋರ್ಟ್‌ವರೆಗೂ ಹೋಗಿ ಯಾವುದೇ ಪರಿಹಾರ ಕಾಣದೆ, ಆರೋಪಿಗಳು ಯಾರು ಎನ್ನುವುದು ಇನ್ನೂ ನಿಗೂಢವಾಗಿ ಉಳಿದಿದೆ. ಸಿಬಿಐ ತನಿಖೆಯಿಂದಲೂ ಸೌಜನ್ಯಾಳಿಗೆ ನ್ಯಾಯ ಸಿಕ್ಕಿಲ್ಲ. ಈ ಮಧ್ಯೆ ಕೆಲವರು ಈ ಪ್ರಕರಣವನ್ನು ಕೈಗೆತ್ತಿಕೊಂಡು ಹೋರಾಟ ಶುರು ಮಾಡಿದ್ದಾರೆ. ಸಮೀರ್ ಎಂ.ಡಿಯ ವೀಡಿಯೊ ಬಳಿಕ ಕರಾವಳಿಯಲ್ಲಿ ಸೌಜನ್ಯಾ ಪ್ರಕರಣ ಮತ್ತೊಮ್ಮೆ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಇದರ ಕಾವು ಎಷ್ಟು ದಿನ ಇರುತ್ತದೆ ಎನ್ನುವುದನ್ನು ಕಾದು ನೋಡಬೇಕು.