ಒಂದೇ ವಾರದಲ್ಲಿ 2500 ಸೈನಿಕರ ರಾಜೀನಾಮೆ
ಇಸ್ಲಾಮಾಬಾದ್: ಬಲೂಚಿಸ್ಥಾನ ಪ್ರತ್ಯೇಕವಾದಿ ಹೋರಾಟಗಾರರು ಇತ್ತೀಚೆಗೆ ಬೆನ್ನುಬೆನ್ನಿಗೆ ನಡೆಸಿದ ಎರಡು ದಾಳಿಗಳಿಂದ ಕಂಗೆಟ್ಟಿರುವ ಪಾಕಿಸ್ಥಾನದ ಸೈನಿಕರು ಈಗ ಸೈನ್ಯವನ್ನೇ ಬಿಟ್ಟು ಹೋಗುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಬಂಡುಕೋರರು ಒಂದಿಡೀ ರೈಲನ್ನೇ ಅಪಹರಿಸಿ ಒತ್ತೆಸೆರೆಯಲ್ಲಿಟ್ಟಿದ್ದರು. ಈ ಕಾರ್ಯಾಚರಣೆಯಲ್ಲಿ ಪ್ರಯಾಣಿಕರ ಜೊತೆ ಅನೇಕ ಯೋಧರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ಎರಡೇ ದಿನದಲ್ಲಿ ಸೇನೆಯ ವಾಹನಗಳ ಮೇಲೆ ದಾಳಿ ಮಾಡಿ 90 ಯೋಧರನ್ನು ಕೊಂದಿದ್ದರು. ಈ ಎರಡು ಘಟನೆಗಳು ಪಾಕಿಸ್ಥಾನ ಸೇನೆಯ ಜಂಘಾಬಲವನ್ನು ಉಡುಗಿಸಿಬಿಟ್ಟಿದೆ. ಪಾಕಿಸ್ಥಾನದ ಅನೇಕ ಕಡೆಗಳಲ್ಲಿ ಸೈನ್ಯದ ಮೇಲೆ ಹೆಚ್ಚುತ್ತಿರುವ ಭಯೋತ್ಪಾದಕರ ದಾಳಿಯಿಂದ ಪಾಕ್ ಯೋಧರು ಸೇನೆಗೆ ರಾಜೀನಾಮೆ ನೀಡುತ್ತಿದ್ದಾರೆ. ಒಂದೇ ವಾರದಲ್ಲಿ 2500ಕ್ಕೂ ಹೆಚ್ಚು ಸೈನಿಕರು ರಾಜೀನಾಮೆ ನೀಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.
ಬಲೂಚಿಸ್ಥಾನ, ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಬಂಡುಕೋರರು ಸೇನೆಯನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ನಡೆಸುತ್ತಿದ್ದಾರೆ. ಈ ದಾಳಿಗಳಿಂದ ಭಾರಿ ಸಂಖ್ಯೆಯಲ್ಲಿ ಸೈನಿಕರು ಮೃತಪಟ್ಟಿರುವುದೇ ಇತರರು ರಾಜೀನಾಮೆ ನೀಡಲು ಕಾರಣ ಎನ್ನಲಾಗಿದೆ. ಮಾ.16ರಂದು ಪಾಕ್ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಪುಲ್ವಾಮಾ ಮಾದರಿಯ ಆತ್ಮಾಹುತಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 90 ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದು ಬಿಎಲ್ಎ ಹೇಳಿಕೊಂಡಿತ್ತು. ಪಾಕಿಸ್ಥಾನದಲ್ಲಿ ಭದ್ರತಾ ವ್ಯವಸ್ಥೆ ಬಹಳ ಕಳಪೆಯಾಗಿದೆ. ಇದಕ್ಕಾಗಿ ಸೇನೆ ತೊರೆಯುತ್ತಿರುವ ಯೋಧರು ತಮ್ಮ ಜೀವ ಕಳೆದುಕೊಳ್ಳುವ ಬದಲಿಗೆ ಸೇನೆ ತೊರೆದು ವಿದೇಶಗಳಲ್ಲಿ ಉದ್ಯೋಗಕ್ಕೆ ವಲಸೆ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.