ಹಲವು ವಾಹನಗಳು ಬೆಂಕಿಗಾಹುತಿ, ಕಲ್ಲು ತೂರಾಟದಲ್ಲಿ ಪೊಲೀಸರಿಗೆ ಗಾಯ
ಮುಂಬಯಿ: ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿರುವ ಮೊಗಲ ದೊರೆ ಔರಂಗಜೇಬನ ಗೋರಿಯನ್ನು ತೆರವುಗೊಳಿಸಬೇಕೆಂಬ ಬೇಡಿಕೆ ಹಿಂಸಾಚಾರಕ್ಕೆ ತಿರುಗಿದ್ದು, ನಿನ್ನೆ ನಾಗಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಅನೇಕ ವಾಹನಗಳನ್ನು ಸುಟ್ಟು ಹಾಕಲಾಗಿದೆ. ನಾಗಪುರ ನಗರದಲ್ಲಿ ಆರ್‌ಎಸ್‌ಎಸ್ ಮುಖ್ಯ ಕಚೇರಿಯಿರುವ ಮಹಲ್‌ನಲ್ಲಿ ಹಿಂದು ಸಂಘಟನೆಗಳು ಔರಂಗಜೇಬನ ಗೋರಿಯನ್ನು ತೆರವುಗೊಳಿಸಬೇಕೆಂದು ಅಗ್ರಹಿಸಿ ಪ್ರತಿಭಟನೆ ನಡೆಸಿದಾಗ ಹಿಂಸಾಚಾರ ಸ್ಫೋಟಗೊಂಡಿದೆ.
ಬಜರಂಗ ದಳ, ವಿಶ್ವ ಹಿಂದು ಪರಿಷತ್ ಸೇರಿದಂತೆ ವಿವಿಧ ಹಿಂದು ಸಂಘಟನೆಗಳ ಪ್ರತಿಭಟನೆ ವೇಳೆ ಕುರಾನ್ ಸುಟ್ಟು ಹಾಕಲಾಗಿದೆ ಎಂಬ ವದಂತಿಯನ್ನು ಹರಡಲಾಗಿದ್ದು, ಇದರಿಂದಾಗಿ ಎರಡು ಕೋಮುಗಳ ನಡುವೆ ಹಿಂಸಾತ್ಮಕ ಘರ್ಷಣೆ ಸಂಭವಿಸಿದೆ. ಸುಮಾರು 65 ಗಲಭೆಕೋರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಗಲಭೆಯಲ್ಲಿ 35ರಷ್ಟು ಪೊಲೀಸರೂ ಗಾಯಗೊಂಡಿದ್ದಾರೆ. 25ಕ್ಕೂ ಅಧಿಕ ಕಾರು ಮತ್ತು ಬೈಕ್‌ಗಳನ್ನು ಸುಟ್ಟು ಹಾಕಲಾಗಿದೆ. ವ್ಯಾಪಕವಾಗಿ ಕಲ್ಲು ತೂರಾಟ ನಡೆದಿದ್ದು, ನಗರವೀಗ ಪ್ರಕ್ಷುಬ್ಧಗೊಂಡಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಾಗಪುರದ ಹನ್ಸಪುರಿ ಎಂಬಲ್ಲೂ ಹಿಂಸಾಚಾರ ನಡೆದು ವಾಹನಗಳನ್ನು ಸುಟ್ಟು ಹಾಕಲಾಗಿದೆ. ಗಲಭೆಕೋರರು ಅಂಗಡಿ, ಒಂದು ಕ್ಲಿನಿಕ್ ಹಾಗೂ ಹಲವು ಅಂಗಡಿಮುಂಗಟ್ಟುಗಳಲ್ಲಿ ದಾಂಧಲೆ ಎಸಗಿದ್ದಾರೆ.
ಏನಿದು ಔರಂಗಜೇಬ್ ಗೋರಿ ವಿವಾದ?
ಸಂಭಾಜಿ ನಗರದಲ್ಲಿರುವ ಔರಂಗಜೇಬನ ಗೋರಿಯನ್ನು ನೆಲಸಮಮಾಡಬೇಕೆಂಬ ವಿವಾದ ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿದೆ. ಕೆಲ ದಿನಗಳ ಹಿಂದೆ ಸಮಾಜವಾದಿ ಪಾರ್ಟಿಯ ಶಾಸಕ ಅಬು ಅಜೀಂ ಆಜ್ಮಿ ಸದನದಲ್ಲಿ ಔರಂಗಜೇಬನನ್ನು ಪ್ರಶಂಸಿಸುವುದರೊಂದಿಗೆ ಮಹಾರಾಷ್ಟ್ರದಲ್ಲಿ ಔರಂಗಜೇಬನ ಗೋರಿಯ ವಿವಾದ ಭುಗಿಲೆದ್ದಿದೆ. ಅಬು ಆಜ್ಮಿಯನ್ನು ಸದನದಿಂದ ಅಮಾನತಗೊಳಿಸಲಾಗಿದೆ. ಛಾವಾ ಸಿನೆಮಾ ಕೂಡ ಔರಂಗಜೇಬನ ವಿವಾದದ ಬೆಂಕಿಗೆ ತುಪ್ಪ ಸುರಿದಿದೆ. ಸಿನೆಮಾದಲ್ಲಿ ಛತ್ರಪತಿ ಶೀವಾಜಿ ಮಹಾರಾಜನ ಪುತ್ರ ಸಂಭಾಜಿಯನ್ನು ಔರಂಗಜೇಬ ಕ್ರೂರವಾಗಿ ಹಿಂಸಿಸಿ ಕೊಲ್ಲುವುದನ್ನು ತೋರಿಸಲಾಗಿದ್ದು, ಇದು ಮರಾಠಿ ಜನರ ಭಾವನೆಯನ್ನು ಕೆರಳಿಸಿದೆ.
ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿ ಔರಂಗಜೇಬನ ಗೋರಿಯಿದೆ. ಜಿಲ್ಲೆಯ ಕುಲ್ದಾಬಾದ್ ಎಂಬಲ್ಲಿ ಶೇಕ್ ಝೈನುದ್ದೀನ್ ಶಿರಾಜಿ ಎಂಬ ಸೂಫಿ ಸಂತನ ಸಣ್ಣ ದರ್ಗಾದೊಳಗೆ ಔರಂಗಜೇಬನ ಗೋರಿಯಿದೆ. ಈ ಗೋರಿಯ ನಿರ್ವಹಣೆಗಾಗಿ ಸರಕಾರದ ಹಣ ಹೋಗುತ್ತಿತ್ತು ಎಂಬ ವಿಚಾರವೂ ವಿವಾದದ ನಡುವೆ ಮುನ್ನೆಲೆಗೆ ಬಂದಿತ್ತು. ಔರಂಗಬಾದ್ ಜಿಲ್ಲೆಗೆ ಈಗ ಛತ್ರಪತಿ ಸಂಭಾಜಿ ನಗರ್ ಎಂದು ಮರುನಾಮಕರಣ ಮಾಡಲಾಗಿದೆ. ಾದರೆ ಇಲ್ಲಿರುವ ಗೋರಿಯನ್ನು ಹಾಗೆಯೇ ಉಳಿಸಿಕೊಂಡಿದ್ದು, ಇದು ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಹಿಂದು ಸಂಘಟನೆಗಳು ಈ ಗೋರಿ ಮಹಾರಾಷ್ಟ್ರಕ್ಕೆ ಕಳಂಕ ಎಂದು ಹೇಳಿ ಅದನ್ನು ನೆಲಸಮ ಮಾಡಬೇಕೆಂದು ಒತ್ತಾಯಿಸುತ್ತಿವೆ.