ಸ್ಟಾರ್ಬಕ್ಸ್ ಕಂಪನಿ ವಿರುದ್ಧ ತೀರ್ಪು ನೀಡಿದ ನ್ಯಾಯಾಲಯ
ಕ್ಯಾಲಿಫೋರ್ನಿಯಾ : ಕಾಫಿ ಮೈಮೇಲೆ ಚೆಲ್ಲಿದ್ದಕ್ಕೆ ಸ್ಟಾರ್ಬಕ್ಸ್ ಭಾರಿ ಬೆಲೆಯನ್ನೇ ತೆರಬೇಕಾಗಿ ಬಂದಿದೆ. ಸ್ಟಾರ್ಬಕ್ಸ್ನ ಬಿಸಿ ಕಾಫಿ ತೊಡೆ ಭಾಗದ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಗೆ 50 ಮಿಲಿಯನ್ ಡಾಲರ್ ಅಂದರೆ ಸುಮಾರು 415 ಕೋಟಿ ರೂ. ಪರಿಹಾರ ನೀಡಬೇಕೆಂದು ಸ್ಟಾರ್ಬಕ್ಸ್ಗೆ ಕೋರ್ಟ್ ಆದೇಶ ನೀಡಿದೆ. ಕಾಫಿ ಮುಚ್ಚಳವನ್ನು ಸರಿಯಾಗಿ ಮುಚ್ಚದೆ ಕೊಟ್ಟಿದ್ದರಿಂದ ಬಿಸಿ ಕಾಫಿ ತೊಡೆ ಮೇಲೆ ಬಿದ್ದಿದ್ದು, ಪರಿಣಾಮ ಆ ವ್ಯಕ್ತಿಯ ಜನನಾಂಗಕ್ಕೂ ಗಾಯಗಳಾಗಿದ್ದವು. 2020ರಲ್ಲಿ ಈ ಕೇಸ್ ಕೋರ್ಟ್ ಮೆಟ್ಟಿಲೇರಿದ್ದು, ಇದೀಗ ನ್ಯಾಯಾಲಯ ಸಂತ್ರಸ್ತನಿಗೆ ಪರಿಹಾರ ನೀಡಬೇಕೆಂದು ಆದೇಶಿಸಿದೆ.
ಈ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾ ನಗರದಲ್ಲಿ ನಡೆದಿದೆ.
ಸ್ಟಾರ್ಬಕ್ಸ್ ಅಮೆರಿಕದ ಜನಪ್ರಿಯ ಕಂಪನಿಯಾಗಿದ್ದು, ಹಲವೆಡೆ ಕಾಫಿಶಾಪ್ಗಳನ್ನು ಹೊಂದಿದೆ. ಡೆಲಿವರಿ ವಾಹನದ ಚಾಲಕ ಲಾಸ್ ಏಂಜಲೀಸ್ನ ಸ್ಟಾರ್ಬಕ್ಸ್ ಔಟ್ಲೆಟ್ನಲ್ಲಿ ಕಾಫಿ ಖರೀದಿಸಿದ್ದರು. ಆದರೆ ಕಾಫಿ ಕಪ್ನ ಮುಚ್ಚಳವನ್ನು ಸರಿಯಾಗಿ ಮುಚ್ಚದೆ ಕೊಟ್ಟಿದ್ದರಿಂದ ಬಿಸಿ ಕಾಫಿ ಚಾಲಕನ ತೊಡೆ ಭಾಗದ ಮೇಲೆ ಬಿದ್ದಿದೆ. ಪರಿಣಾಮ ತೊಡೆ ಭಾಗ ಸುಟ್ಟು ಹೋಗಿತ್ತು, ಜನನಾಂಗಕ್ಕೂ ಗಾಯವಾಗಿತ್ತು. ಕಾಫಿ ಕಪ್ ಸರಿಯಾಗಿ ಮುಚ್ಚದೆ ನಿರ್ಲಕ್ಷ್ಯ ತೋರಿದ ಸ್ಟಾರ್ಬಕ್ಸ್ ವಿರುದ್ಧ ಡ್ರೈವರ್ ಮೈಕಲ್ ಗಾರ್ಸಿಯಾ 2020ರಲ್ಲಿ ಕ್ಯಾಲಿಫೋರ್ನಿಯಾ ಸುಪೀರಿಯರ್ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದರು. ಗಾರ್ಸಿಯಾಗೆ ದೈಹಿಕ ನೋವು ಮಾತ್ರವಲ್ಲದೆ ಮಾನಸಿಕ ನೋವು ಕೂಡ ಆಗಿದೆ ಎಂದು ವಕೀಲರು ವಾದಿಸಿದ್ದರು. ಆರೋಪ, ಪ್ರತ್ಯಾರೋಪವನ್ನು ಆಲಿಸಿದ ಬಳಿಕ ಕೋರ್ಟ್ ಸಂತ್ರಸ್ತ ಮೈಕೆಲ್ ಗಾರ್ಸಿಯಾ ಅವರಿಗೆ 50 ಮಿಲಿಯನ್ ಡಾಲರ್ ಅಂದರೆ ಸುಮಾರು 415 ಕೋಟಿ ರೂ. ಪರಿಹಾರ ಪಾವತಿಸಲು ಸ್ಟಾರ್ಬಕ್ಸ್ಗೆ ಆದೇಶಿಸಿದೆ.
ನ್ಯಾಯಾಲಯದ ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಸ್ಟಾರ್ಬಕ್ಸ್ ಹೇಳಿದೆ. ನಾವು ಗಾರ್ಸಿಯಾ ಬಗ್ಗೆ ಸಹಾನುಭೂತಿ ಹೊಂದಿದ್ದೇವೆ, ಆದರೆ ಈ ಅವಘಡಕ್ಕೆ ನಾವೇ ಕಾರಣರು ಎಂಬ ತೀರ್ಪನ್ನು ನಾವು ಒಪ್ಪುವುದಿಲ್ಲ, ಪರಿಹಾರ ಹಣದ ಮೊತ್ತ ತುಂಬಾ ಹೆಚ್ಚಾಗಿದೆ ಎಂದು ನಾವು ಭಾವಿಸುತ್ತೇವೆ, ಕಂಪನಿ ತನ್ನ ಅಂಗಡಿಗಳಲ್ಲಿ ಬಿಸಿ ಪಾನೀಯಗಳ ನಿರ್ವಹಣೆ ಸೇರಿದಂತೆ ಅತ್ಯುನ್ನತ ಸುರಕ್ಷತಾ ಮಾನದಂಡಗಳಿಗೆ ಯಾವಾಗಲೂ ಬದ್ಧವಾಗಿದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.