ಸರಕಾರಿ ಕಾರಲ್ಲೇ ಚಿನ್ನ ಕಳ್ಳ ಸಾಗಾಟ
ಬೆಂಗಳೂರು : ದುಬೈಯಿಂದ ಚಿನ್ನ ಕಳ್ಳ ಸಾಗಾಟ ಮಾಡಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಕಳ್ಳ ಸಾಗಾಟಕ್ಕೆ ಬಳಸಿದ ತಂತ್ರವನ್ನು ಪತ್ತೆಹಚಿದ್ದಾರೆ. ರನ್ಯಾ ಕಳ್ಳ ಮಾರ್ಗದಲ್ಲಿ ತಂದ ಚಿನ್ನವನ್ನು ವಿಮಾನ ನಿಲ್ದಾಣದಿಂದ ಸಾಗಿಸಲು ಕರ್ನಾಟಕ ಸರಕಾರದ ಕಾರನ್ನೇ ಬಳಸುತ್ತಿದ್ದಳು ಎಂದು ಡಿಆರ್ಐ ಅಧಿಕಾರಿಗಳು ತಿಳಿಸಿದ್ದಾರೆ.
ರನ್ಯಾ ರಾವ್ ಮಲತಂದೆ ರಾಮಚಂದ್ರ ರಾವ್ ಐಪಿಎಸ್ ದರ್ಜೆಯ ಪೊಲೀಸ್ ಅಧಿಕಾರಿಯಾಗಿದ್ದು, ಡಿಜಿಪಿ ಹುದ್ದೆಯಲ್ಲಿದ್ದರು. ತಂದೆಯ ಅಧಿಕಾರವನ್ನು ರನ್ಯಾ ರಾವ್ ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿರುವುದು ಡಿಆರ್ಐ ಅಧಿಕಾರಿಗಳ ತನಿಖೆಯಲ್ಲಿ ಪತ್ತೆಯಾಗಿದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಗಳಿಗೆ ಎರಡು ಹೆಚ್ಚುವರಿ ಕಾರುಗಳನ್ನು ನೀಡಲಾಗುತ್ತದೆ. ಈ ಹೆಚ್ಚುವರಿ ಕಾರು ಅಧಿಕಾರಿಯವರ ಕುಟುಂಬದವರಿಗೆ ಬಳಕೆಯಾಗುತ್ತದೆ. ಅದೇ ರೀತಿ ಡಿಜಿಪಿ ರಾಮಚಂದ್ರ ರಾವ್ ಅವರಿಗೂ ಕೂಡ ಸರ್ಕಾರ ಹೆಚ್ಚುವರಿ ಕಾರು ನೀಡಲಾಗಿತ್ತು. ಈ ಸರ್ಕಾರಿ ವಾಹನದಲ್ಲೇ ರನ್ಯಾ ರಾವ್ ಚಿನ್ನವನ್ನು ಸಾಗಿಸಿದ್ದಾಳೆ. ರನ್ಯಾ ರಾವ್ ಇದೇ ವಾಹನದಲ್ಲಿ ಹಲವು ಬಾರಿ ವಿಮಾನ ನಿಲ್ದಾಣಕ್ಕೆ ಓಡಾಡಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.
ರನ್ಯಾ ರಾವ್ ಕೇಸ್ಗೆ ದಿನಕ್ಕೊಂದು ತಿರುವು ಸಿಗುತ್ತಿದ್ದು, ಡಿಆರ್ಐ ಕಸ್ಟಡಿಯಲ್ಲಿರುವ ಆಕೆ ತಾನು ಚಿನ್ನ ಸಾಗಾಟ ಮಾಡಿಯೇ ಇಲ್ಲ, ನನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಿ ಹಾಕಿದ್ದಾರೆ ಎಂದು ಹೇಳಿ ಯಾಮಾರಿಸಲು ನೋಡಿದ್ದಾಳೆ.
ಈ ನಡುವೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರೊಟೋಕಾಲ್ ಸಿಬ್ಬಂದಿಗೆ ಸಿಬಿಐ ಅಧಿಕಾರಿ ಗೌರವ್ ಗುಪ್ತಾ ನೇತೃತ್ವದಲ್ಲಿ ತನಿಖಾ ತಂಡ ನೋಟಿಸ್ ಜಾರಿ ಮಾಡಿದೆ. ಬಸವರಾಜು, ಮಹಾಂತೇಶ್, ವೆಂಕಟರಾಜು ಎಂಬುವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಶನಿವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಗೌರವ್ ಗುಪ್ತಾ ಟೀಂ ಈಗಾಗಲೇ ಪ್ರೊಟೋಕಾಲ್ ನಿಯಮಗಳನ್ನು ಅಧ್ಯಯನ ಮಾಡಿದೆ. ಅಧಿಕಾರಿಗಳು ಘಟನೆಗೂ ಹಿಂದಿನ ದಿನದ ಸಿಸಿಟಿವಿ ಪರಿಶೀಲಿಸಿದೆ.
ಈಗಿರುವ ಹಾಗೂ ಹಿಂದೆ ಇದ್ದ ಅಧಿಕಾರಿಗಳಿಗೆ ತನಿಖೆ ಬಿಸಿ ತಟ್ಟುತ್ತಿದೆ. ರನ್ಯಾ ರಾವ್ ಒಂದು ವರ್ಷದಲ್ಲಿ 25ಕ್ಕೂ ಹೆಚ್ಚು ಬಾರಿ ವಿದೇಶ ಪ್ರಯಾಣ ಮಾಡಿದ್ದರು. ಐಎಎಸ್ ಅಧಿಕಾರಿ ಗೌರವ್ ಗುಪ್ತಾ, ಡಿಐಜಿ ವಂಶಿಕೃಷ್ಣರಿಂದ ವಿಮಾನ ನಿಲ್ದಾಣದ ಟರ್ಮಿನಲ್-2ನಲ್ಲಿ ಪರಿಶೀಲಿಸಲಾಗಿದೆ. ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ, ಸಿಬ್ಬಂದಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಚಿನ್ನ ಕಳ್ಳಸಾಗಾಣಿಕೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನಿಖಾ ಸಂಸ್ಥೆಗಳು ಕೂಡ ತನಿಖೆ ನಡೆಸುತ್ತಿವೆ. ನಟಿ ರನ್ಯಾ ರಾವ್ಗೆ ಇ.ಡಿ, ಸಿಬಿಐನಿಂದ ಬಂಧನ ಭೀತಿ ಎದುರಾಗಿದೆ.