7 ವಿದ್ಯಾರ್ಥಿನಿಯರು ಅಸ್ವಸ್ಥ; ನಾಲ್ಕು ಮಂದಿ ಗಂಭೀರ
ಬೆಂಗಳೂರು: ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶುಕ್ರವಾರ ಹೋಳಿ ಆಚರಿಸುತ್ತಿದ್ದಾಗ ದುಷ್ಕರ್ಮಿಗಳ ಗುಂಪೊಂದು ರಾಸಾಯನಿಕ ಮಿಶ್ರಿತ ಬಣ್ಣವನ್ನು ಎರಚಿದ್ದರಿಂದ ಏಳು ಶಾಲಾ ವಿದ್ಯಾರ್ಥಿನಿಯರು ಗಂಭೀರವಾಗಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಆಘಾತಕಾರಿ ಘಟನೆ ನಡೆದಿದೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಉಸಿರಾಟದ ತೊಂದರೆ ಮತ್ತು ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್)ಗೆ ಸ್ಥಳಾಂತರಿಸಲಾಗಿದೆ. ಉಳಿದ ಬಾಲಕಿಯರು ಲಕ್ಷ್ಮೇಶ್ವರದ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂತ್ರಸ್ತರ ಪೋಷಕರು ಆಸ್ಪತ್ರೆಗೆ ಧಾವಿಸಿದ್ದಾರೆ. ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯರು ಲಕ್ಷ್ಮೇಶ್ವರ ಪಟ್ಟಣದ ಸುವರ್ಣಗಿರಿ ತಾಂಡಾ ಬಳಿಯ ಬಸ್ ನಿಲ್ದಾಣದಲ್ಲಿ ಪರೀಕ್ಷೆ ಬರೆಯಲು ಶಾಲೆಗೆ ಹೋಗುವ ಸಲುವಾಗಿ ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಬಸ್ ನಿಲ್ದಾಣದ ಬಳಿ ನಿಂತಿದ್ದ ವಿದ್ಯಾರ್ಥಿನಿಯರ ಮೇಲೆ ಬಣ್ಣ ಎರಚಲು ಪ್ರಾರಂಭಿಸಿದ್ದಾರೆ. ಅದೇ ವೇಳೆಗೆ ಶಾಲಾ ಬಸ್ ಬರುತ್ತಿದ್ದಂತೆ ಬಾಲಕಿಯರು ಬಸ್ ಹತ್ತಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಆ ಗುಂಪು ಬೈಕ್‌ಗಳಲ್ಲಿ ಬಸ್ ಅನ್ನು ಹಿಂಬಾಲಿಸಿದೆ. ಬಳಿಕ ಬಸ್ ಹತ್ತಿ ಏಳು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ರಾಸಾಯನಿಕ ಲೇಪಿತ ಬಣ್ಣಗಳನ್ನು ಎರಚಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ತನಿಖೆಯಲ್ಲಿ ಆ ದ್ರವದಲ್ಲಿ ಸಗಣಿ, ಮೊಟ್ಟೆ, ಫೀನಾಲ್ ಮತ್ತು ಬಣ್ಣಗಳ ಮಿಶ್ರಣವಿತ್ತು ಎಂದು ತಿಳಿದುಬಂದಿದೆ. ಬಾಲಕಿಯರಿಗೆ ಅರಿವಿಲ್ಲದೆಯೇ ಸಣ್ಣ ಪ್ರಮಾಣದ ದ್ರವ ಒಳಗಡೆ ಹೋಗಿದ್ದು, ಇದರಿಂದಾಗಿ ಅವರಿಗೆ ಉಸಿರಾಟದ ತೊಂದರೆ ಮತ್ತು ಇತರ ಲಕ್ಷಣಗಳು ಕಂಡುಬಂದಿವೆ. ಅಸ್ವಸ್ಥರಾದ ವಿದ್ಯಾರ್ಥಿನಿಯನ್ನು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ಪೋಷಕರಿಗೆ ಭರವಸೆ ನೀಡಿದ್ದಾರೆ. ಆರೋಪಿಗಳು ಬೈಕ್‌ಗಳಲ್ಲಿ ಪರಾರಿಯಾಗಿದ್ದು, ಪೊಲೀಸರು ಅವರನ್ನು ಪತ್ತೆಹಚ್ಚಲು ಸ್ಥಳೀಯರು ಮತ್ತು ಶಾಲಾ ಬಸ್‌ನಲ್ಲಿದ್ದ ಇತರರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.