ಬೆಂಗಳೂರು: ವಿಧಾನ ಮಂಡಲ ಕಲಾಪದಲ್ಲಿ ನಿನ್ನೆ ಕರಾವಳಿಯ ಅಭಿವೃದ್ಧಿ ಕುರಿತು ಚರ್ಚೆ ನಡೆಯುತ್ತಿರುವ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತ್ಯೇಕ ರಾಜ್ಯದ ಕುರಿತು ಪರೋಕ್ಷವಾಗಿ ಮಾಡಿದ ಉಲ್ಲೇಖ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕರವಾಳಿ ಭಾಗದ ಶಾಸಕರು ಸುನಿಲ್ ಕುಮಾರ್ ನೇತೃತ್ವದಲ್ಲಿ ನಿನ್ನೆ ಕರಾವಳಿ ಜಿಲ್ಲೆಗಳು ಅಭಿವೃದ್ಧಿಯಲ್ಲಿ ಹಿಂದುಳಿದ ಕುರಿತು ಮಾತನಾಡಿದ್ದಾರೆ. ಅಭಿವೃದ್ಧಿಗೆ ಅಪಾರವಾದ ಅವಕಾಶಗಳಿದ್ದರೂ ಕರಾವಳಿ ಜಿಲ್ಲೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಶಾಸಕರು ಒಕ್ಕೂರಲಿನಿಂದ ಹೇಳಿದ್ದಾರೆ.
ಸುನಿಲ್ ಕುಮಾರ್ ಮಾತನಾಡಿ, ಸದನದಲ್ಲಿ ಉತ್ತರ ಕರ್ನಾಟಕ, ಬೆಂಗಳೂರು ಬಗ್ಗೆ ಚರ್ಚೆ ಆಗುತ್ತದೆ. ಆದರೆ ಕರಾವಳಿ ಬಗ್ಗೆ ಯಾವತ್ತೂ ಚರ್ಚೆಗಳು ನಡೆದಿಲ್ಲ. ಕರಾವಳಿಯ ಟೆಂಪಲ್ ಟೂರಿಸಂ ಅಭಿವೃದ್ಧಿ ಪಡಿಸಬೇಕು. 330 ಕಿ.ಮೀ ಇರುವ ಬೀಚ್ ಟೂರಿಸಂ ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿದರು.
ಕರಾವಳಿಯನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯುತ್ತಾರೆ. ಕರಾವಳಿ ಜಿಲ್ಲೆಯ ಜನ ರಾಷ್ಟ್ರೀಯತೆ, ಹಿಂದುತ್ವದಲ್ಲಿ ಮುಂಚೂಣಿಯಲ್ಲಿದ್ದಾರೆ. ಕರಾವಳಿ ಜನ ಹೋಟೆಲ್ ಮ್ಯಾನೇಜ್ಮೆಂಟ್, ದೇವಸ್ಥಾನ ಮ್ಯಾನೇಜ್ಮೆಂಟ್ ಹಾಗೂ ಖಾಸಗಿ ಬಸ್ ಮ್ಯಾನೇಜ್ಮೆಂಟ್‌ನಲ್ಲಿ ಪ್ರಸಿದ್ಧರು. ಸರ್ಕಾರವನ್ನು ಅವಲಂಬಿಸದೆ ಸರ್ಕಾರಿ ಶಾಲೆಗಳನ್ನು ನಮ್ಮ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಆದರೆ ಕರಾವಳಿ ಭಾಗದ ಸಮಸ್ಯೆ ಬಗ್ಗೆ ಚರ್ಚೆ ನಡೆಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹರೀಶ್ ಪೂಂಜ, ಕರಾವಳಿ ಅಭಿವೃದ್ಧಿ ಕಡೆಗಣಿಸಿದರೆ ನಾವು ಪ್ರತ್ಯೇಕ ವಿಧಾನಸೌಧ ಕಟ್ಟಿಕೊಂಡು ಮಾತಾಡುವ ವ್ಯವಸ್ಥೆ ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಸ್ಪೀಕರ್ ಯು.ಟಿ.ಖಾದರ್, ಹರೀಶ್ ಪೂಂಜಗೆ ಬೇಗ ಮುಗಿಸಿ ಎಂದರು. ಕರಾವಳಿ ಜಿಲ್ಲೆಗಳು ನಮ್ಮ ಜೊತೆಗೆ ಇರಬೇಕು. ನೀವೂ ನಾವೂ ಒಟ್ಟಿಗೆ ಇರಬೇಕು, ಅಪಸ್ವರ ಬೇಡ ಎಂದು ಕಾಂಗ್ರೆಸಿಗರು ಹೇಳಿದರು.
ಆದರೆ ಹರೀಶ್ ಪೂಂಜ ಹೇಳಿದ ಪ್ರತ್ಯೇಕ ವಿಧಾನ ಸೌಧದ ಹೇಳಿಕೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನಾರಾ ರೀತಿಯ ಚರ್ಚೆಗಳು ಪ್ರಾರಂಭವಾಗಿವೆ. ಅನೇಕ ಮಂದಿ ಹರೀಶ್ ಪೂಂಜ ದಿಟ್ಟತನವನ್ನು ಮೆಚ್ಚಿದ್ದಾರೆ. ಸಾಕಷ್ಟು ಮಂದಿ ಕರಾವಳಿಯನ್ನು ಪ್ರತ್ಯೇಕ ರಾಜ್ಯ ಮಾಡುವುದರ ಸಾಧಕ ಬಾಧಕ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರಾವಳಿ ಪ್ರತ್ಯೇಕ ರಾಜ್ಯ : ಚರ್ಚೆಗೆ ಗ್ರಾಸವಾದ ಹರೀಶ್ ಪೂಂಜ ಹೇಳಿಕೆ
