ಚಿನ್ನ ಸದಾಶಿವ ನಗರಕ್ಕೆ ಹೋಗಿದೆಯಾ? ಚಾಮರಾಜ ನಗರಕ್ಕೆ ಹೋಗಿದೆಯಾ ಹೇಳಿಕೆಯಿಂದ ಸಚಿವರಿಗೆ ಕಸಿವಿಸಿ
ಬೆಂಗಳೂರು: ಚಿತ್ರನಟಿ ರನ್ಯಾ ರಾವ್ ಶಾಮೀಲಾಗಿರುವ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಶಾಸಕ ಸುನಿಲ್ ಕುಮಾರ್ ನೀಡಿದ ಹೇಳಿಕೆ ಸಂಚಲನ ಹುಟ್ಟಿಸಿದೆ. ಈ ಹೇಳಿಕೆಗೆ ಹಲವು ಸಚಿವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮದವರ ಜೊತೆಗೆ ಮಾತನಾಡುವಾಗ ಸುನಿಲ್ ಕುಮಾರ್ ನಟಿ ರನ್ಯಾ ರಾವ್ ತಂದ ಚಿನ್ನ ಎಲ್ಲಿಗೆ ಹೋಗಿದೆ ಸದಾಶಿವ ನಗರಕ್ಕೆ ಹೋಗಿದೆಯಾ ಅಥವಾ ಚಾಮರಾಜ ನಗರಕ್ಕೆ ಹೋಗಿದೆಯಾ ಎಂಬುದರ ಬಗ್ಗೆ ತನಿಖೆಯಾಗಲಿ ಎಂದಿದ್ದರು.
ಈ ಹೇಳಿಕೆಗೆ ಹಲವು ಸಚಿವರಿಗೆ ಕಸಿವಿಸಿ ಉಂಟುಮಾಡಿದೆ. ಸದಾಶಿವ ನಗರದಲ್ಲಿ ಹಲವು ಪ್ರಮುಖ ಸಚಿವರ ಮನೆಗಳಿವೆ, ಚಾಮರಾಜ ನಗರ ಸಚಿವ ಜಮೀರ್ ಖಾನ್ ಅವರ ಏರಿಯಾ. ಹೀಗಾಗಿ ಸಚಿವರು ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದು, ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಸಚಿವರು ಶಾಮೀಲಾಗಿದ್ದಾರೆ ಎನ್ನುವುದು ಊಹಾಪೋಹ, ಸಚಿವರು ಶಾಮೀಲಾಗಿದ್ದರೆ ತನಿಖೆಯಿಂದ ಹೊರಬರಲಿ, ಅದಕ್ಕೂ ಮೊದಲೇ ಊಹಾಪೋಹ ಹಬ್ಬಿಸಬೇಡಿ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಇನ್ನೊಂದೆಡೆ ಈ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಸತ್ಯ ವಿಷಯ ತನಿಖೆಯಿಂದ ಹೊರಬರಲಿ, ಕೇಂದ್ರೀಯ ಸಂಸ್ಥೆಗಳೇ ತನಿಖೆ ನಡೆಸುತ್ತಿರುವುದರಿಂದ ಬಿಜೆಪಿಯವರು ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುವುದು ಬೇಡ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಕೂಡ ದುಬೈಯಲ್ಲಿ ವಹಿವಾಟುಗಳಿವೆ ಇದೆ ಯತ್ನಾಳ್ ಆರೋಪಿಸುತ್ತಿರುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಮಾಧ್ಯಮದವರ ಜೊತೆ ಮಾತನಾಡಿದ ಸುನಿಲ್ ಕುಮಾರ್, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಸಚಿವರು ಭಾಗಿಯಾಗಿರುವ ಬಗ್ಗೆ ದಿನ ಕಳೆದಂತೆ ಅನುಮಾನಗಳು ದಟ್ಟವಾಗುತ್ತಿವೆ. ರನ್ಯಾ ರಾವ್ ತಿಂಗಳಿಗೆ 4-5 ಬಾರಿ ದುಬೈಗೆ ಹೋಗಿ ಬರುತ್ತಿದ್ದರಂತೆ, ಅಂದರೆ ಹಿಂದೆಲ್ಲ ಅವರು ಕಳ್ಳ ಸಾಗಾಣಿಕೆ ಮಾಡಿಕೊಂಡು ದೇಶಕ್ಕೆ ತೆಗೆದುಕೊಂಡು ಬಂದ ಚಿನ್ನ ಎಲ್ಲಿಗೆ ಹೋಯಿತು? ಅದು ಚಾಮರಾಜಪೇಟೆಗೆ ಹೋಯ್ತಾ ಅಥವಾ ಸದಾಶಿವನಗರಕ್ಕೆ ಹೋಯ್ತಾ ಅನ್ನೋದು ಗೊತ್ತಾಗಬೇಕಿದೆ ಎಂದು ಹೇಳಿದ್ದರು.
ಆಕೆಗೆ ಸರ್ಕಾರದಿಂದ ಯಾಕೆ ಪ್ರೊಟೊಕಾಲ್ ಸಿಗುತಿತ್ತು ಅನ್ನೋದು ಸಹ ಬೆಳಕಿಗೆ ಬರಬೇಕಿದೆ. ಇಡೀ ಪ್ರಕರಣದಲ್ಲಿ ಅನೇಕ ಅನುಮಾನಗಳಿವೆ. ಗೃಹ ಸಚಿವರು ನನಗೇನೂ ಗೊತ್ತಿಲ್ಲ ಎಂದು ಹೇಳಿ ತಪ್ಪಿಸಕೊಳ್ಳಲು ಸಾಧ್ಯವಿಲ್ಲ. ಪ್ರಕರಣದ ಪ್ರಾಥಮಿಕ ತನಿಖೆಯ ಬಗ್ಗೆ ಸರಕಾರ ಸದನದಲ್ಲಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ರಾಜಕಾರಣಿಗಳ, ಸರಕಾರದ, ಅಧಿಕಾರಿಗಳ ಕೈವಾಡ ಇಲ್ಲದೆ ಇಷ್ಟು ದೊಡ್ಡ ಮಟ್ಟದಲ್ಲಿ ಚಿನ್ನ ಕಳ್ಳಸಾಗಾಟ ಮಾಡುವುದು ಸಾಧ್ಯನಾ? ಓರ್ವ ಐಪಿಎಸ್ ಅಧಿಕಾರಿಯ ಮಗಳಿಗೆ ಪ್ರೊಟೊಕಾಲ್ ಕೊಡುವ ಅಗತ್ಯ ಏನಿತ್ತು ಎನ್ನುವುದು ಬೆಳಕಿಗೆ ಬರಬೇಕಾಗಿದೆ. ಗೃಹ ಸಚಿವರು ನನಗೇನೂ ಗೊತ್ತಿಲ್ಲ ಎಂದು ಹೇಳುತ್ತಿರುವುದು ದುರದೃಷ್ಟಕರ. ಹೀಗೆ ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಸರಕಾರದ ದೊಡ್ಡ ಪಾತ್ರ ಇರುವ ಅನುಮಾನವಿದೆ ಎಂದಿದ್ದಾರೆ.
ಕೇಂದ್ರ ಸರಕಾರದ ಅಧೀನದಲ್ಲಿರುವ ಡಿಆರ್‌ಐ ಅಲರ್ಟ್ ಆಗಿದ್ದ ಕಾರಣ ಇಷ್ಟು ದೊಡ್ಡಮಟ್ಟದ ಕಳ್ಳ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಸೆರೆಯಾದ ಕೂಡಲೇ ನಟಿ ರನ್ಯಾ ರಾವ್ ಯಾರೋ ಪ್ರಭಾವಿಗಳಿಗೆ ಫೋನ್ ಮಾಡಿದ್ದಾರೆ ಎನ್ನುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಪ್ರಭಾವಿಗಳು ಯಾರು ಎನ್ನುವುದನ್ನು ಸರಕಾರ ಬಹಿರಂಗಪಡಿಸಬೇಕು, ಸಚಿವರು ಶಾಮೀಲಾಗಿರುವ ಅನುಮಾನದ ಕುರಿತು ಸರಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಗೃಹ ಸಚಿವರೇ ನನಗೇನೂ ಗೊತ್ತಿಲ್ಲ ಎನ್ನುತ್ತಿರುವುದು ಅನುಮಾನಗಳನ್ನು ಹೆಚ್ಚಿಸುತ್ತಿದೆ ಎಂದಿದ್ದಾರೆ.