ವಿಮಾನ ನಿಲ್ದಾಣದಿಂದ ಹೊರಬರಲು ವಿಶೇಷ ಪ್ರೊಟೊಕಾಲ್ ಒದಗಿಸಿದ ಅನುಮಾನ
ಬೆಂಗಳೂರು: ಕನ್ನಡದ ನಟಿ ರನ್ಯಾ ರಾವ್ ಒಳಗೊಂಡಿರುವ ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಆಕೆಯ ಮಲತಂದೆ ಡಿಜಿಪಿ ಡಾ.ರಾಮಚಂದ್ರ ರಾವ್ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ರನ್ಯಾಗೆ ವಿಮಾನ ನಿಲ್ದಾಣದಲ್ಲಿ ಪ್ರೊಟೊಕಾಲ್ ನೀಡಿದ ಬಗ್ಗೆ ತನಿಖೆ ನಡೆಸಿ ಒಂದು ವಾರದ ಒಳಗೆ ವರದಿ ಸಲ್ಲಿಸುವಂತೆ ಗೃಹ ಇಲಾಖೆ ಮಂಗಳವಾರ ಆದೇಶಿಸಿದೆ. ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಮಚಂದ್ರ ರಾವ್ ಕೂಡ ಶಾಮಿಲಾಗಿದ್ದಾರೆಯೇ? ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಿಸುವಾಗ ಶಿಷ್ಟಾಚಾರ ದುರ್ಬಳಕೆ ಆಗಿರುವುದರಲ್ಲಿ ಅವರ ಕೈವಾಡ ಇದೆಯೇ ಎಂಬ ಬಗ್ಗೆ ಒಂದು ವಾರದ ಒಳಗೆ ತನಿಖೆ ನಡೆಸಲು ಸೂಚಿಸಲಾಗಿದೆ.
ರನ್ಯಾ ಚಿನ್ನ ಸಾಗಾಟ ಮಾಡುವಾಗ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಹೆಸರು ಬಳಸಿದ್ದರು. ಹೀಗಾಗಿ ಶಿಷ್ಟಾಚಾರದ ಸೌಲಭ್ಯ ಪಡೆಯಲು ಕಾರಣವಾದ ಸಂಗತಿಗಳು ಯಾವುವು? ಕೇಸ್ನಲ್ಲಿ ರಾಮಚಂದ್ರರಾವ್ ಪಾತ್ರ ಏನೇನಿದೆ ಎಂಬ ಬಗ್ಗೆ ತನಿಖೆ ನಡೆಸಲು ಅಧಿಕಾರಿ ನೇಮಿಸಲಾಗಿದೆ. ಇವರು ತಕ್ಷಣ ತನಿಖೆ ಪ್ರಾರಂಭಿಸಿ ಒಂದು ವಾರದಲ್ಲಿ ವರದಿ ಸಲ್ಲಿಸಬೇಕಿದೆ.
ಪ್ರಕರಣ ಸಂಬಂಧ ಹೋಟೆಲ್ ಉದ್ಯಮಿಯ ಮೊಮ್ಮಗ ತರುಣ್ ರಾಜು ಎಂಬಾತನನ್ನು ಡಿಆರ್ಐ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ತನಿಖೆ ಚುರುಕುಗೊಂಡಿದೆ.
ರನ್ಯಾ ರಾವ್ ವಿಚಾರದಲ್ಲಿ ವಿಮಾನ ನಿಲ್ದಾಣದ ಶಿಷ್ಟಾಚಾರ ದರ್ಬಳಕೆಯಾಗಿರುವ ಬಗ್ಗೆ ಪೊಲೀಸ್ ಆಯುಕ್ತರಿಗೆ ಡಿಸಿಪಿ ಸುಚಿತ್ ವರದಿ ಸಲ್ಲಿಸಿದ್ದಾರೆ. ರನ್ಯಾ ಬಂಧನಕ್ಕೊಳಗಾದ ದಿನ ಶಿಷ್ಟಾಚಾರ ನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್ ಬಸವರಾಜ್ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದುಬೈನಿಂದ ಬರುವಾಗಲೇ ಕಾನ್‌ಸ್ಟೆಬಲ್ ಬಸವರಾಜ್‌ಗೆ ರನ್ಯಾ ಕರೆ ಮಾಡಿ ಟರ್ಮಿನಲ್ 1ಕ್ಕೆ ಬರುವುದಾಗಿ ತಿಳಿಸಿದ್ದಾಳೆ. ಈ ವೇಳೆ ಇಲ್ಲ ಮೇಡಂ, ಬೇರೆ ಅಫೀಸರ್ ಬರುತ್ತಿದ್ದಾರೆ ಅವರನ್ನು ರಿಸೀವ್ ಮಾಡಿಕೊಳ್ಳಬೇಕು ಎಂದು ಬಸವರಾಜ್ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ರನ್ಯಾ, ನೀವೇ ಬರಬೇಕು. ಇಲ್ಲಾಂದ್ರೆ ಅಪ್ಪಾಜಿಗೆ ಹೇಳುತ್ತೇನೆ ಎಂದು ಬೆದರಿಸಿದ್ದಳು. ಈ ವಿಚಾರವನ್ನು ಪೊಲೀಸ್ ಆಯುಕ್ತರಿಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಡಿಜಿಪಿ ಕೆ. ರಾಮಚಂದ್ರ ರಾವ್ ಮೂಲತಃ ಆಂಧ್ರ ಪ್ರದೇಶದವರು. ಚಿಕ್ಕಮಗಳೂರು ಜಿಲ್ಲೆ ಕಾಫಿ ಪ್ಲಾಂಟರ್ ಮಾಲಕಿಯ ಜೊತೆ ಎರಡನೇ ವಿವಾಹವಾಗಿದ್ದರು. ರನ್ಯಾ ರಾವ್ ಎರಡನೇ ಹೆಂಡತಿಯ ಮೊದಲ ಗಂಡನ ಮಗಳು. ರಾಮಚಂದ್ರ ರಾವ್ ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ಲಿಮಿಟೆಡ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಗಿ ಸೇವೆ ಸಲ್ಲಿಸಿದ್ದರು. 2023ರಲ್ಲಿ ಇವರನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಡಿಜಿಪಿ ಮತ್ತು ಅಧ್ಯಕ್ಷ ಮತ್ತು ಎಂಡಿ ಆಗಿ ಬಡ್ತಿ ನೀಡಲಾಯಿತು. ರಾಮಚಂದ್ರ ರಾವ್ 2014ರಲ್ಲಿ ದಕ್ಷಿಣ ವಲಯದ ಐಜಿಪಿಯಾಗಿದ್ದ ಸಮಯದಲ್ಲಿ ಜಪ್ತಿ ಮಾಡಲಾಗಿದ್ದ 2.20 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಇದೇ ಪ್ರಕರಣದಲ್ಲಿ ರಾಮಚಂದ್ರ ರಾವ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ಸಿಐಡಿ ತನಿಖೆಯಲ್ಲಿ ಆರೋಪ ಸಾಬೀತಾಗಲಿಲ್ಲ. ಈ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ವಿರುದ್ಧ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿತ್ತು.