ಹೇಳಿಕೆಗಳಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ನಟಿ
ಬೆಂಗಳೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಕೊಡವ ನ್ಯಾಶನಲ್ ಕೌನ್ಸಿಲ್ ಮನವಿ ಮಾಡಿದೆ. ಜನಪ್ರಿಯ ನಟಿಯಾಗಿರುವ ರಶ್ಮಿಕಾಗೆ ಮಂದಣ್ಣ ಅವರಿಗೆ ಬೆದರಿಕೆಯಿದೆ. ಹೀಗಾಗಿ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಗೃಹ ಸಚಿವರಿಗೆ ಬರೆದಿರುವ ಪತ್ರದಲ್ಲಿ ಕೊಡವ ನ್ಯಾಶನಲ್ ಕೌನ್ಸಿಲ್ ಹೇಳಿದೆ.
ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವಿವಾದಗಳಿಗೆ ಗುರಿಯಾಗುತ್ತಿದ್ದಾರೆ. ನಾನು ಹೈದರಾಬಾದ್‌ನವಳು ಎಂದು ಅವರು ಇತ್ತೀಚೆಗೆ ಹೇಳಿರುವುದು ಕನ್ನಡಿಗರನ್ನು ಕೆರಳಿಸಿದೆ. ಈ ಹೇಳಿಕೆಗಾಗಿ ಕನ್ನಡ ಸಂಘಟನೆಗಳು ಅವರನ್ನು ಟೀಕಿಸಿದ್ದವು. ಕನ್ನಡ ಹೋರಾಟಗಾರ ಟಿ.ನಾರಾಯಣ ಗೌಡ ಅವರು ಟೀಕಿಸಿದ್ದರು.
ಕೆಲದಿನಗಳ ಹಿಂದೆ ಕಾಂಗ್ರೆಸ್ ಶಾಸಕ ರವಿ ಗಣಿಗ ಅವರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಹ್ವಾನ ನೀಡಿದರೂ ರಶ್ಮಿಕಾ ಬಂದಿಲ್ಲ ಎಂದು ಕಿಡಿ ಕಾರಿದ್ದರು. ನಾವು ರಶ್ಮಿಕಾ ಮಂದಣ್ಣ ಅವರನ್ನು ಚಿತ್ರೋತ್ಸವಕ್ಕೆ ಆಹ್ವಾನಿಸಿದ್ದೆವು. ಆದರೆ ಅವರು ನಮ್ಮ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಬೆದರಿಕೆ ದಾಟಿಯಲ್ಲಿ ಎಚ್ಚರಿಸಿದ್ದರು.
ಇಂಥ ಹೇಳಿಕೆಗಳನ್ನು ಬೆದರಿಕೆ ಎಂದು ಪರಿಗಣಿಸಿ ರಶ್ಮಿಕಾಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಬೇಕೆಂದು ಕೊಡವ ನ್ಯಾಶನಲ್ ಕೌನ್ಸಿಲ್ ಆಗ್ರಹಿಸಿದೆ.