ಒಂದು ತಿಂಗಳ ಬಳಿಕ ದಟ್ಟ ಕಾಡಿನಲ್ಲಿ ಇಬ್ಬರ ಶವ ಪತ್ತೆ
ಕಾಸರಗೋಡು: 42 ವರ್ಷದ ಆಟೋ ಚಾಲಕ ಅಂಕಲ್ ಜೊತೆ 15ರ ಹರೆಯದ ಶಾಲಾ ಬಾಲಕಿಯ ಪ್ರೀತಿ ಇಬ್ಬರ ಸಾವಿನಲ್ಲಿ ದುರಂತ ಅಂತ್ಯಗೊಂಡ ಘಟನೆಯೊಂದು ಕಾಸರಗೋಡಿನ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಕಳೆದ ಫೆ.11ರಂದು ನಾಪತ್ತೆಯಾಗಿದ್ದ ಇವರಿಬ್ಬರ ಮೃತದೇಹಗಳು ಒಂದು ತಿಂಗಳ ಬಳಿಕ ಕಾಡಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿವೆ.
ಕುಂಬಳೆ ಪೈವಳಿಕೆ ಸಮೀಪ ಮಂಡೆಕಾಪು ಗ್ರಾಮದ ಬಳಿ ಈ ಘಟನೆ ನಡೆದಿದೆ. ಆಟೋ ಚಾಲಕ ಪ್ರದೀಪ್ ಮತ್ತು 15 ವರ್ಷದ ವಿದ್ಯಾರ್ಥಿನಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಪ್ರದೀಪ್ ಅಪ್ರಾಪ್ತೆಯ ಮನೆಗೆ ನಿತ್ಯ ಭೇಟಿ ನೀಡುತ್ತಿದ್ದು, ಆಗ ಪ್ರೀತಿ ಉಂಟಾಗಿದೆ.
ಫೆ.11ರಂದು ರಾತ್ರಿ ಪ್ರದೀಪ್ ಮತ್ತು ವಿದ್ಯಾರ್ಥಿನಿ ನಾಪತ್ತೆಯಾಗಿದ್ದರು. ಮನೆಯವರೆಲ್ಲರೂ ನಿದ್ರಿಸುತ್ತಿದ್ದ ವೇಳೆ ಮನೆಯ ಹಿಂದಿನ ಬಾಗಿಲಿನ ಮೂಲಕ ವಿದ್ಯಾರ್ಥಿನಿ ಪಲಾಯನ ಮಾಡಿದ್ದಳು. ಅದೇ ದಿನ ಮಗಳು ನಾಪತ್ತೆಯಾದ ಬಗ್ಗೆ ಕುಂಬಳೆ ಪೊಲೀಸರಿಗೆ ಅಪ್ರಾಪ್ತೆಯ ತಾಯಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸಿದರೂ ಇಬ್ಬರೂ ಪತ್ತೆಯಾಗಿರಲಿಲ್ಲ. ಇಬ್ಬರ ಮೊಬೈಲ್ ಫೋನ್ಗಳು ಮಂಡೆಕಾಪು ಬಳಿ ಸ್ವಿಚ್ ಆಫ್ ಆಗಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಇದರ ಆಧಾರದ ಮೇಲೆ ಡ್ರೋನ್ ಹಾಗೂ ಪೊಲೀಸ್ ಶ್ವಾನ ಬಳಸಿ ಶೋಧ ನಡೆಸಲಾಗಿತ್ತು. ಆದರೂ ಇಬ್ಬರ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಅಪ್ರಾಪ್ತೆ ಪತ್ತೆಯಾಗದ ಹಿನ್ನೆಲೆಯಲ್ಲಿ ಪೋಷಕರು ಹೈಕೋರ್ಟ್ ಮೊರೆ ಹೋಗಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ನಿನ್ನೆ ಸ್ಥಳೀಯರ ನೆರವಿನೊಂದಿಗೆ ಇಬ್ಬರ ಮನೆಯ ಸಮೀಪ ಹುಡುಕಾಟ ಮಾಡಲಾಗಿದೆ. ಆಗ ಎಕರೆಗಟ್ಟಲೆ ಹರಡಿರುವ ಅಕೇಶಿಯಾ ಅರಣ್ಯದಲ್ಲಿ ಒಂದೇ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಸ್ಥಳದಲ್ಲಿ ಒಂದು ಚಾಕು ಮತ್ತು ಎರಡು ಮೊಬೈಲ್ ಫೋನ್ಗಳು ಪತ್ತೆಯಾಗಿವೆ.