ಭಾರತ-ನ್ಯೂಜಿಲ್ಯಾಂಡ್ ಫೈನಲ್ ಕದನಕ್ಕೆ ಕ್ಷಣಗಣನೆ; ಭಾರತವೇ ಬುಕ್ಕಿಗಳ ಫೇವರಿಟ್
ದುಬೈ : ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಐಸಿಸಿ ಟೂರ್ನಿಯ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಗೆದ್ದ ಇತಿಹಾಸವಿಲ್ಲ. ಹೀಗಾಗಿ ಈ ಬಾರಿ ಏನಾಗಲಿದೆ ಎಂಬ ತೀವ್ರ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿದೆ. ಇದರ ಜೊತೆಗೆ ಈ ಪಂದ್ಯದ ಮೇಲೆ ಭರ್ಜರಿ ಬೆಟ್ಟಿಂಗ್ ಕೂಡ ನಡೆದಿದೆ.
ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಮಧ್ಯಾಹ್ನ ಪಂದ್ಯ ಶುರುವಾಗಲಿದೆ. ಇದಕ್ಕೂ ಮುನ್ನ ಎರಡು ಬಾರಿ ಭಾರತ ಮತ್ತು ನ್ಯೂಝಿಲೆಂಡ್ ಫೈನಲ್ ಪಂದ್ಯಗಳನ್ನಾಡಿದೆ. ಈ ಎರಡು ಮ್ಯಾಚ್ಗಳಲ್ಲೂ ಕಿವೀಸ್ ಪಡೆ ಜಯಿಸಿರುವುದು ವಿಶೇಷ.
ಐಸಿಸಿ ಟೂರ್ನಿಗಳಲ್ಲಿ ನ್ಯೂಝಿಲೆಂಡ್ ತಂಡವು ಈವರೆಗೆ 6 ಬಾರಿ ಫೈನಲ್ ಆಡಿದೆ. ಈ ಆರು ಫೈನಲ್ಗಳಲ್ಲಿ ನ್ಯೂಜಿಲ್ಯಾಂಡ್ ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಅದು ಕೂಡ ಭಾರತದ ವಿರುದ್ಧ.
2000ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಮುಖಾಮುಖಿಯಾಗಿ 4 ವಿಕೆಟ್ಗಳ ಜಯ ಸಾಧಿಸಿ ಕಿವೀಸ್ ಪಡೆ ಟ್ರೋಫಿ ಎತ್ತಿ ಹಿಡಿಯಿತು. 2021ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿ ಕಿವೀಸ್ ಪಡೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಟೀಮ್ ಇಂಡಿಯಾ ಕಳೆದ ಎರಡು ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದ್ದರೆ, ಅತ್ತ ನ್ಯೂಜಿಲ್ಯಾಂಡ್ ತಂಡ ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ. ಹೀಗಾಗಿ ಇಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
5 ಸಾವಿರ ಕೋಟಿ ರೂ. ಬೆಟ್ಟಿಂಗ್
ಈ ಒಂದೇ ಪಂದ್ಯದ ಮೇಲೆ ಬರೋಬ್ಬರಿ 5,000 ಕೋಟಿ ರೂ. ಬೆಟ್ಟಿಂಗ್ ನಡೆದಿದೆ ಎಂದು ಹೇಳಲಾಗಿದೆ. ಭೂಗತ ಲೋಕದ ನೆರಳಲ್ಲಿ ಬೃಹತ್ ಮೊತ್ತದ ಬೆಟ್ಟಿಂಗ್ ನಡೆದಿದ್ದು, ವಿಶ್ವದ ದೊಡ್ಡ ಬುಕಿಗಳೆಲ್ಲಾ ದುಬೈ ಸೇರಿದ್ದಾರೆ. ಎಲ್ಲರಿಗೂ ಟೀಂ ಇಂಡಿಯಾ ಗೆಲ್ಲುವ ಫೇವರೇಟ್ ಆಗಿದೆ ಎನ್ನಲಾಗಿದೆ.
ಈ ನಡುವೆ ದೆಹಲಿ ಪೊಲೀಸರು ಚಾಂಪಿಯನ್ಸ್ ಟ್ರೋಫಿ ಸಮಯದಲ್ಲಿ ದೊಡ್ಡಮಟ್ಟದಲ್ಲಿ ಬೆಟ್ಟಿಂಗ್ ನಡೆಸಿದ್ದ ಕನಿಷ್ಠ ಐವರು ಬುಕ್ಕಿಗಳನ್ನು ಬಂಧಿಸಿದ್ದಾರೆ. ತನಿಖೆಯಲ್ಲಿ ಅವರಿಗೆ ದುಬೈ ನಂಟಿರುವುದು ಬೆಳಕಿಗೆ ಬಂದಿದೆ.
ಬಂಧಿತ ಪರ್ವೀನ್ ಕೊಚ್ಚರ್ ಮತ್ತು ಸಂಜಯ್ ಕುಮಾರ್ ಎಂಬವರು ಲ್ಯಾಪ್ಟಾಪ್, ಮೊಬೈಲ್ ಫೋನ್ಗಳನ್ನ ಬಳಸಿಕೊಂಡು ಲೈವ್ ಬೆಟ್ಟಿಂಗ್ ನಡೆಸುತ್ತಿದ್ದಾಗ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಸಿಕ್ಕ ಹಲವಾರು ಇಲೆಕ್ಟ್ರಾನಿಕ್ ಉಪಕರಣಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.