ಬೆಚ್ಚಿಬೀಳಿಸುತ್ತಿದೆ ಇಂಜಿನಿಯರಿಂಗ್ ವಿದ್ಯಾರ್ಥಿ ಎಸಗಿದ ಕೃತ್ಯ
ಚೆನ್ನೈ : ಇಬ್ಬರು ಪ್ರೇಯಸಿಯರ ಜೊತೆ ಸೇರಿಕೊಂಡು ಮೂರನೇ ಪ್ರೇಯಸಿಯನ್ನು ಕೊಂದು ಕಮರಿಗೆ ಎಸೆದ ಪ್ರಕರಣವನ್ನು ತಮಿಳುನಾಡಿನ ಸೇಲಂ ಪೊಲೀಸರು ಭೇದಿಸಿದ್ದಾರೆ. ಲೋಗನಾಯಕಿ (35) ಕೊಲೆಯಾದ ಮಹಿಳೆ. ಅವಳ ಪ್ರಿಯಕರ ಇಂಜಿನಿಯರಿಂಗ್ ವಿದ್ಯಾರ್ಥಿ ಅಬ್ದುಲ್ ಅಝೀಝ್ (22) ಮತ್ತು ಅವನ ಪ್ರೇಯಸಿಯರಾದ ಐಟಿ ಉದ್ಯೋಗಿ ತಾವಿಯಾ ಸುಲ್ತಾನ (22) ಮತ್ತು ನರ್ಸಿಂಗ್ ವಿದ್ಯಾರ್ಥಿನಿ ಮೋನಿಶಾ (21) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ತಾವಿಯಾ ಸುಲ್ತಾನ ಮತ್ತು ಮೋನಿಶಾಳನ್ನು ಬಲೆಗೆ ಹಾಕಿಕೊಳ್ಳುವ ಮುನ್ನ ಆರೋಪಿ ಅಬ್ದುಲ್ ಸೋಷಿಯಲ್ ಮೀಡಿಯಾ ಮೂಲಕ ಖಾಸಗಿ ಟ್ಯೂಷನ್ ಶಿಕ್ಷಕಿಯಾಗಿದ್ದ ಲೋಗನಾಯಕಿಯನ್ನು ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದ. ಲೋಗನಾಯಕಿ ಅವನನ್ನು ಮದುವೆಯಾಗುವ ಉದ್ದೇಶದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಅಲ್ಬಿಯಾ ಎಂದು ತನ್ನ ಹೆಸರು ಬದಲಾಯಿಸಿಕೊಂಡಿದ್ದಳು. ಆದರೆ ಅಬ್ದುಲ್ ಮದುವೆಯಾಗಲು ತಯಾರಿರಲಿಲ್ಲ. ಅವನ ಉಳಿದಿಬ್ಬರು ಪ್ರೇಯಸಿಯರು ಕೂಡ ಅಬ್ದುಲ್‌ನಿಂದ ದೂರವಿರುವಂತೆ ಲೋಗನಾಯಕಿಗೆ ತಾಕೀತು ಮಾಡಿದ್ದರು.
ಲೋಗನಾಯಕಿ ಮಾ.1ರಂದು ತಾನಿದ್ದ ಲೇಡೀಸ್ ಹಾಸ್ಟಲ್‌ನಿಂದ ನಾಪತ್ತೆಯಾಗಿದ್ದಳು. ಪೊಲೀಸರು ಆಕೆಯ ಕಾಲ್ ರೆಕಾರ್ಡ್ ಪರಿಶೀಲಿಸಿದಾಗ ಆಕೆ ಅಬ್ದುಲ್ ಜೊತೆ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಆಕೆ ಅಬ್ದುಲ್‌ನನ್ನು ಭೇಟಿಯಾಗುವ ಸಲುವಾಗಿ ಯೆರಾಕುಡ್‌ಗೆ ಹೋಗಿದ್ದಳು. ಇದಕ್ಕೂ ಮೊದಲು ಆಕೆ ತನ್ನನ್ನು ಮದುವೆಯಾಗದಿದ್ದರೆ ಆತ್ಮಹ್ತಯೆ ಮಾಡಿಕೊಳ್ಳುವುದಾಗಿ ಹೇಳಿ ಕೈಗೆ ಗಾಯಮಾಡಿಕೊಂಡಿದ್ದಳು. ಹೀಗಾಗಿ ಆತ ಲೋಗನಾಯಕಿಯನ್ನು ಯೆರಾಕುಡ್‌ಗೆ ಬರಲು ಹೇಳಿದ್ದ. ಅಲ್ಲಿ ಅಬ್ದುಲ್ ಮತ್ತು ಅವನ ಪ್ರೇಯಸಿಯರು ಆಕೆಯನ್ನು ಭೇಟಿ ಮಾಡಿ ಮತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ನೆಪಹೇಳಿ ಗುಡ್ಡಗಾಡು ಪ್ರದೇಶಕ್ಕೆ ಕರದುಕೊಂಡು ಹೋಗಿದ್ದರು. ಗಾಯ ಶಮನಕ್ಕೆ ಇಂಜೆಕ್ಷನ್ ಕೊಡುತ್ತೇನೆ ಎಂದು ಹೇಳಿ ನರ್ಸಿಂಗ್ ವಿದ್ಯಾರ್ಥಿನಿ ಆಕೆಗೆ ವಿಷದ ಇಂಜೆಕ್ಷನ್ ಚುಚ್ಚಿದ್ದಳು. ಆಕೆ ಪ್ರಜ್ಞೆ ಕಳೆದುಕೊಂಡಾಗ ಮೂವರು ಸೇರಿ ಆಕೆಯನ್ನು ಸುಮಾರು 30 ಅಡಿ ಆಳದ ಕಮರಿಗೆ ಎಸೆದಿದ್ದರು. ಆಕೆ ಅತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸುವುದು ಅವರ ಉದ್ದೇಶವಾಗಿತ್ತು. ಅದರೆ ಕಾಲ್ ರೆಕಾರ್ಡ್‌ನಿಂದಾಗಿ ಅಬ್ದುಲ್ಲ ತನ್ನ ಪ್ರೇಯಸಿಯರ ಜೊತೆ ಸೇರಿ ಲೋಗನಾಯಕಿಯನ್ನು ಸಾಯಿಸಲು ಮೊದಲೇ ಸಂಚು ಮಾಡಿದ್ದ ವಿಷಯ ತಿಳಿದುಬಂದಿದೆ.