ಬಜೆಟ್‌ ಹೈಲೈಟ್ಸ್‌ : ಮಲ್ಪೆಯಲ್ಲಿ ಮಲ್ಟಿ ಲೆವೆಲ್‌ ಪಾರ್ಕಿಂಗ್‌; ಮತ್ಸ್ಯದರ್ಶಿನಿ, ಸುಸ್ಥಿರ ಮೀನುಗಾರಿಕೆಗೆ ಪ್ರೋತ್ಸಾಹ

ಕರಾವಳಿಗೆ ಸಿದ್ದರಾಮಯ್ಯ ಕೊಡುಗೆಗಳು

ಬೆಂಗಳೂರು: ಉಡುಪಿ ಮಲ್ಪೆಯಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್, ಮೈಸೂರಿನಲ್ಲಿ ಹೈಟೆಕ್ ಮತ್ಸ್ಯದರ್ಶಿನಿ, ರಾಜ್ಯದ ಮತ್ಸ್ಯ ಸಂಪತ್ತಿನ ರಕ್ಷಣೆಯೊಂದಿಗೆ ಸುಸ್ಥಿರ ಮೀನುಗಾರಿಕೆ, ಹೊಸ ಇಂಜಿನ್‌ ಖರೀದಿಸಲು ಶೇ.50 ರಷ್ಟು ಒಂದು ಲಕ್ಷ ರೂ. ಮಿತಿಗೊಳಪಟ್ಟು ಸಹಾಯಧನ…ಇವು ಕರಾವಳಿಗೆ ಸಿದ್ದರಾಮಯ್ಯ ಬಜೆಟ್‌ನಲ್ಲಿ ಕೊಟ್ಟಿರುವ ಕೊಡುಗೆಗಳು.
ಮಲ್ಟಿ-ಲೆವೆಲ್‌ ಪಾರ್ಕಿಂಗ್‌ ವ್ಯವಸ್ಥೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ಮತ್ಸ್ಯ ಸಂಪತ್ತಿನ ರಕ್ಷಣೆಯೊಂದಿಗೆ ಸುಸ್ಥಿರ ಮೀನುಗಾರಿಕೆ ಹಾಗೂ ಮೀನುಗಾರರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ಮೀನುಗಾರಿಕಾ ನೀತಿಯನ್ನು ರೂಪಿಸಲಾಗುವುದು. ಮಂಗಳೂರಿನಲ್ಲಿರುವ ಮೀನುಗಾರಿಕೆ ಕಾಲೇಜಿಗೆ ಪ್ರಸ್ತುತ ನಿಗದಿಪಡಿಸಿರುವ ವಿದ್ಯಾರ್ಥಿಗಳ ಸಂಖ್ಯಾಬಲವನ್ನು ದ್ವಿಗುಣಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿನ ಮೀನುಗಾರಿಕೆ ಕೊಂಡಿ ರಸ್ತೆಗಳನ್ನು ನಬಾರ್ಡ್‌ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲು 30 ಕೋಟಿ ರೂ. ಒದಗಿಸಲಾಗುವುದು. ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಆಯ್ದ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಸಲು ಶೇ.50ರಷ್ಟು ಅಥವಾ ಗರಿಷ್ಠ 3 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.

 
 

-ರಾಜ್ಯದಲ್ಲಿ ನೋಂದಣಿಯಾಗಿರುವ ಮೋಟರೀಕೃತ ದೋಣಿಗಳಲ್ಲಿ 15 ವರ್ಷ ಕಾಲಾವಧಿ ಮೀರಿರುವ ಹಳೆಯ ಇಂಜಿನ್‌ಗಳನ್ನು ಬದಲಾಯಿಸಿ, ಹೊಸ ಇಂಜಿನ್‌ ಖರೀದಿಸಲು ಶೇ.50 ರಷ್ಟು ಒಂದು ಲಕ್ಷ ರೂ. ಮಿತಿಗೊಳಪಟ್ಟು ಸಹಾಯಧನ ನೀಡಲಾಗುವುದು.
-ಪ್ರವಾಸಿಗರಿಗೆ ಶುಚಿ-ರುಚಿಯಾದ ಪೌಷ್ಟಿಕ ಮೀನು ಖಾದ್ಯಗಳನ್ನು ಒದಗಿಸಲು ಮೈಸೂರಿನಲ್ಲಿ ಹೈ-ಟೆಕ್‌ ಮತ್ಸ್ಯದರ್ಶಿನಿಯನ್ನು ಪ್ರಾರಂಭಿಸಲಾಗುವುದು.
-ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ವಾಹನ ದಟ್ಟಣೆಯನ್ನು ನಿರ್ವಹಿಸಲು “ಮಲ್ಟಿ-ಲೆವೆಲ್‌ ಪಾರ್ಕಿಂಗ್‌” ವ್ಯವಸ್ಥೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು.
-ಆಳ ಸಮುದ್ರ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಪ್ರಸ್ತುತ ಇರುವ ಮೀನುಗಾರಿಕೆ ದೋಣಿಗಳ ಉದ್ದದ ಮಿತಿಯನ್ನು ಸಡಿಲಿಸಲು ಕ್ರಮವಹಿಸಲಾಗುವುದು.
-ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟ ನಿವಾರಣೆಗೆ “ಅನುಗ್ರಹ” ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಡಿ ಹಸು, ಎಮ್ಮೆ ಮತ್ತು ಎತ್ತುಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು 10,000 ರೂ. ಗಳಿಂದ 15,000 ರೂ. ಗಳಿಗೆ; ಕುರಿ/ಮೇಕೆಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 5,000 ರೂ. ಗಳಿಂದ 7,500 ರೂ. ಗಳಿಗೆ ಹಾಗೂ 3-6 ತಿಂಗಳ ಕುರಿ/ಮೇಕೆ ಮರಿಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 3,500 ರೂ.ಗಳಿಂದ 5,000 ರೂ.ಗಳಿಗೆ ಹೆಚ್ಚಿಸಲಾಗುವುದು.
-ಕಳೆದ ಎರಡು ವರ್ಷಗಳಲ್ಲಿ 60 ಹೊಸ ಪಶು ಚಿಕಿತ್ಸಾಲಯಗಳನ್ನು ಕಾರ್ಯಾರಂಭಗೊಳಿಸಲಾಗಿದ್ದು, 2025-26ನೇ ಸಾಲಿನಲ್ಲಿ 50 ನೂತನ ಪಶು ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗುವುದು.
-2025-26ನೇ ಸಾಲಿನಲ್ಲಿ 100 ಪಶು ವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ನಬಾರ್ಡ್‌ ಸಹಯೋಗದೊಂದಿಗೆ ನಿರ್ಮಿಸಲಾಗುವುದು.
-ಅಮೃತ್‌ ಮಹಲ್‌ ಕಾವಲುಗಳಲ್ಲಿನ ಭೂ ಒತ್ತುವರಿ ತಡೆಯಲು ಹಾಗೂ ಅಮೃತ್‌ ಮಹಲ್‌ ರಾಸುಗಳಿಗೆ ಮೇವು ಲಭ್ಯವಾಗುವಂತೆ ಮಾಡಲು, ಅರಣ್ಯ ಇಲಾಖೆ ಹಾಗೂ ನರೇಗಾ ಸಹಯೋಗದೊಂದಿಗೆ ಮೇವಿನ ಮರಗಳ ನೆಡುತೋಪು ಅಭಿವೃದ್ಧಿಗೊಳಿಸಲಾಗುವುದು.
-ರಾಜ್ಯದ ಹೆಮ್ಮೆಯ ದೇಶಿ ದನದ ತಳಿಗಳಾದ ಹಳ್ಳಿಕಾರ್‌, ಕಿಲಾರಿ, ಅಮೃತ್‌ ಮಹಲ್‌ ಹಾಗೂ ಬಂಡೂರು ಕುರಿ ತಳಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಎರಡು ಕೋಟಿ ರೂ. ಒದಗಿಸಲಾಗುವುದು.
-ಆಧುನಿಕ ಕುರಿ ಸಾಕಾಣಿಕೆ ಪದ್ಧತಿಗಳು ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಲಸೆ ಕುರಿಗಾರರಿಗೆ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ತರಬೇತಿ ನೀಡಲಾಗುವುದು.
-5 ಗ್ಯಾರಂಟಿ ಯೋಜನೆಗಳಿಗೆ 51,300 ಕೋಟಿ ರೂ. ಅನುದಾನ.
-ಶಕ್ತಿ ಯೋಜನೆಗೆ 5,300 ಕೋಟಿ ರೂ‌. ಅನುದಾನ, ಗೃಹ ಜ್ಯೋತಿಗೆ 10,100 ಕೋಟಿ ರೂ. ಅನುದಾನ, ಗೃಹಲಕ್ಷ್ಮೀ ಯೋಜನೆಗೆ 28 ಸಾವಿರ ಕೋಟಿ ರೂ ಅನುದಾನ ಮೀಸಲಿಟ್ಟಿದ್ದಾರೆ.
-ಕಂಬಳ, ಎತ್ತಿನಬಂಡಿ ಓಟ, ಮಲ್ಲಕಂಬ ಸ್ಪರ್ಧೆಗಳಿಗೆ ಉತ್ತೇಜನ
-ಮದ್ಯದಂಗಡಿಗಳಿಗೆ ಹೊಸ ಲೈಸೆನ್ಸ್‌
-ಜೈನ, ಬೌದ್ಧ, ಸಿಖ್‌ ಸಮುದಾಯಗಳ ಅಭಿವೃದ್ಧಿಗೆ 100 ಕೋಟಿ
-ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ-2 ಕೋಟಿ ಒಳಗಿನ ಕಾಮಗಾರಿಗಳಿಗೆ ಮೀಸಲಾತಿ
-ಅರ್ಚಕರಿಗೆ ತಸ್ತೀಕ್ ಮೊತ್ತ ಹೆಚ್ಚಳ
-ದೇವಾಲಯದ ಆಸ್ತಿ ಸಂರಕ್ಷಣೆಗೆ ಬರಲಿದೆ ಭೂ ವರಾಹ
-ಒತ್ತುವರಿಯಾಗಿರುವ 328 ದೇವಾಲಯದ ಆಸ್ತಿ ಸಂರಕ್ಷಣೆಗೆ ಕ್ರಮ
-ಬೀದಿಬದಿ ವ್ಯಾಪಾರಿಗಳಿಗೆ 1 ಲಕ್ಷ ಸಾಲಕ್ಕೆ ಸಹಾಯಧನ ,ಅಂತಾರಾಷ್ಟ್ರೀಯ ಕುಸ್ತಿಪಟುಗಳಿಗೆ 6 ಸಾವಿರ ರೂ. ಹೆಚ್ಚಳ, ರಾಷ್ಟ್ರೀಯ ಕುಸ್ತಿಪಟು- 5 ಸಾವಿರ ರೂ.ಗೆ ಹೆಚ್ಚಳ, ರಾಜ್ಯಮಟ್ಟದ ಕುಸ್ತಿ ಪಟು- 4500 ರೂ.ಗೆ ಹೆಚ್ಚಳ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top