ಕುರಿಯ: ದತ್ತು ಶಾಲೆಗೆ ಹೊಸ ಗತ್ತು

ನೂತನ ಕೊಠಡಿಗೆ ಶಿಲಾನ್ಯಾಸ, ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ಮಠಂದೂರು

ಕುರಿಯ ಶಾಲೆಯನ್ನು ದತ್ತು ತೆಗೆದುಕೊಂಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ

ಪುತ್ತೂರು: ಕುರಿಯ ಉನ್ನತ ಹಿರಿಯ ಪ್ರಾಥಮಿಕ ಶಾಲೆಯನ್ನು ಬೂಡಿಯಾರ್ ರಾಧಾಕೃಷ್ಣ ರೈ ಅವರು ದತ್ತು ತೆಗೆದುಕೊಂಡಿದ್ದಾರೆ. ಶಾಲೆಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಯೋಜನೆಯ ಮೊದಲ ಕಾರ್ಯಕ್ರಮವಾಗಿ ನೂತನ ಕೊಠಡಿಗೆ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ಮೂಡಿಬಂದಿತು. ಇದರೊಂದಿಗೆ ಶಾಸಕ ಸಂಜೀವ ಮಠಂದೂರು ಅವರು ನೀಡಿರುವ ಸ್ಮಾರ್ಟ್ ಕ್ಲಾಸ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಇದೇ ಸಂದರ್ಭ ಉದ್ಘಾಟಿಸಲಾಯಿತು. ಆದ್ದರಿಂದ ಕುರಿಯ ಸರಕಾರಿ ಶಾಲೆ ಇನ್ನು ಹೊಸ ಗತ್ತಿನೊಂದಿಗೆ ಸಮಾಜಕ್ಕೆ ಮಾದರಿಯಾಗಿ ನಿಲ್ಲಲಿದೆ.

1954ರಲ್ಲಿ ಆರಂಭಗೊಂಡ ಕುರಿಯ ಉನ್ನತ ಹಿರಿಯ ಪ್ರಾಥಮಿಕ ಶಾಲೆ 2.58 ಎಕರೆ ಪ್ರದೇಶದಲ್ಲಿ ಚಾಚಿಕೊಂಡಿದೆ. ಇದರಲ್ಲಿ 1 ಎಕರೆಯಷ್ಟು ಮೈದಾನವೇ ಇದೆ. ಇತ್ತೀಚೆಗೆ 8ನೇ ತರಗತಿಯನ್ನು ಆರಂಭಿಸಲಾಗಿದೆ. ಆದರೂ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. 2010ರಲ್ಲಿ 250 ಇದ್ದ ಮಕ್ಕಳ ಸಂಖ್ಯೆ ಇಂದು 91ಕ್ಕೆ ಇಳಿದಿದೆ. ಆದ್ದರಿಂದ 8ರಷ್ಟಿದ್ದ ಶಿಕ್ಷಕರು ಇಂದು 4 ಮಂದಿ ಮಾತ್ರವಿದ್ದಾರೆ. ಈ ಎಲ್ಲಾ ಕಾರಣದಿಂದ ಸೊರಗುತ್ತಿರುವ ಶಾಲೆಯನ್ನು ಮತ್ತೆ ವೈಭವಕ್ಕೆ ಕೊಂಡೊಯ್ಯಬೇಕು ಎನ್ನುವ ದಿಶೆಯಲ್ಲಿ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರಾಗಿರುವ ಬೂಡಿಯಾರ್ ರಾಧಾಕೃಷ್ಣ ರೈ ಅವರು ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ.

ಶಾಲೆಯನ್ನು ದತ್ತು ತೆಗೆದುಕೊಂಡ ಬಳಿಕ, ಸಲಹಾ ಸಮಿತಿಯನ್ನು ರಚಿಸಲಾಗಿದೆ. ಇವರೆಲ್ಲರ ಅಭಿಪ್ರಾಯವನ್ನು ತೆಗೆದುಕೊಂಡು, ಶಾಲೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯಲಿವೆ.



































 
 

ಏನೆಲ್ಲಾ ಯೋಜನೆಗಳು:

ಕುರಿಯ ಶಾಲೆಯ ಆಸುಪಾಸಿನ ವಿದ್ಯಾರ್ಥಿಗಳು ಸರಕಾರಿ ಶಾಲೆಗೆ ಬರಬೇಕು. ಇದಕ್ಕಾಗಿ ಖಾಸಗಿ ಶಾಲೆಗಳಿಗೆ ಹೋಲಿಸಿದಾಗ ಸರಕಾರಿ ಶಾಲೆಗಳು ಯಾವುದೇ ರೀತಿಯಲ್ಲೂ ಕಡಿಮೆ ಇರದಂತೆ ಅಭಿವೃದ್ಧಿಗೊಳಿಸಬೇಕು ಎನ್ನುವುದು ಬೂಡಿಯಾರ್ ರಾಧಾಕೃಷ್ಣ ರೈ ಅವರ ಕನಸು. ಈ ಹಿನ್ನೆಲೆಯಲ್ಲಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

1)     ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್.ಕೆ.ಜಿ., ಯು.ಕೆ.ಜಿ. ಆರಂಭಿಸುವುದು.

2)     ಶಾಲಾ ಜಾಗಕ್ಕೆ ಆವರಣ ಗೋಡೆ ನಿರ್ಮಿಸಿ, ಕೃಷಿ ಕಾರ್ಯ ಮಾಡುವುದು. ಈ ಮೂಲಕ ಆದಾಯದ ಮೂಲ ಕ್ರೋಢಿಕರಿಸುವುದು.

3)     ಊರವರ ಸಹಕಾರದಿಂದ ಕಂಪ್ಯೂಟರ್ ತರಗತಿ ಆರಂಭ.

4)     ಹೆಚ್ಚುವರಿ ಶಿಕ್ಷಕರ ನೇಮಕ.

5)     ಸ್ಥಳೀಯ ಅಂಗನವಾಡಿಗೂ ಬೆಂಬಲ

6)     ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕ್ರಮ.

7)     ಪಠ್ಯೇತರ ಚಟುವಟಿಕೆಗಳಾದ ಸಂಗೀತ, ಕಲೆ, ಯಕ್ಷಗಾನ, ನೃತ್ಯ, ಯೋಗ, ಕರಾಟೆಗೆ ಪ್ರೋತ್ಸಾಹ.

8)     ದಾನಿಗಳ ಸಹಕಾರದಿಂದ ಸಾರ್ವಜನಿಕ ಗ್ರಂಥಾಲಯ ಆರಂಭಿಸುವುದು.

ಶಾಲೆಗಳಿಗೆ 55 ಕೋಟಿ ರೂ.: ಶಾಸಕ ಮಠಂದೂರು

ಕುರಿಯ ಶಾಲಾ ಕೊಠಡಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು, ಸರಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಈ ಬಾರಿ 55 ಕೋಟಿ ರೂ.ವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಲೆಗಳಿಗೆಂದೇ ಮೀಸಲಿಡಲಾಗಿದೆ. ಕುರಿಯ ಶಾಲಾ ಕೊಠಡಿಗೆ 27.87 ಲಕ್ಷ ರೂ. ಅನುದಾನ ನೀಡಲಾಗಿದೆ. ಮುಂದಿನ 50-100 ವರ್ಷಗಳ ಕಾಲ ಕಟ್ಟಡ ಬಾಳ್ವಿಕೆ ಬರಬೇಕು ಎನ್ನುವ ನಿಟ್ಟಿನಲ್ಲಿ ಗುಣಮಟ್ಟದ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಲಾಗುತ್ತಿದೆ ಎಂದರು.

ಮಾದರಿ ಶಾಲೆಯಾಗಿ ರೂಪಿಸುತ್ತೇವೆ: ಬೂಡಿಯಾರ್

ಶಾಲೆಯ ಸ್ಥಿತಿ ನೋಡಿ ಕಳೆದ 3 ವರ್ಷಗಳಿಂದ ಮನವಿ ಮಾಡುತ್ತಿದ್ದೇನೆ. ಶಾಲೆಯನ್ನು ಯಾರಿಗಾದರೂ ದತ್ತು ನೀಡಿ, ಇಲ್ಲ ನಮಗಾದರೂ ದತ್ತು ನೀಡಿ ಎಂದು. ಇಲ್ಲದಿದ್ದರೆ ಮಕ್ಕಳ ಸಂಖ್ಯೆ 30ಕ್ಕೆ ಇಳಿದು ಬಿಡಬಹುದು. ನಮ್ಮ ಊರಿನ ಶಾಲೆ ಇದು. ದಿನನಿತ್ಯ ಇದೇ ರಸ್ತೆಯಾಗಿ ಹೋಗುವಾಗ ನಮ್ಮ ಕಣ್ಣೆದುರಿಗೆ ಕಾಣುವ ಶಾಲೆ. ಶಾಲೆಯ ಸ್ಥಿತಿ ನೋಡಿ ಮನಸು ಮರುಗುತ್ತದೆ. ಬೇರೆ ಶಾಲೆಗಳಿಂದಲೂ ನನ್ನನ್ನು ಕೇಳಿಕೊಂಡರು – ನಮ್ಮ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಲು. ಆದರೆ ನನಗೆ ನಮ್ಮ ಊರಿನ ಶಾಲೆಯೇ ಮೊದಲು. ಆದ್ದರಿಂದ ನಮ್ಮ ಊರಿನ ಕುರಿಯ ಶಾಲೆಯನ್ನು ದತ್ತು ತೆಗೆದುಕೊಂಡಿದ್ದೇನೆ. ಎಲ್ಲರೂ ಸಹಕಾರ ನೀಡಿದರೆ, ತಾಲೂಕಿನಲ್ಲಿಯೇ ನಂ. 1 ಮಾದರಿ ಶಾಲೆಯಾಗಿ ರೂಪಿಸುತ್ತೇವೆ.

ಬೂಡಿಯಾರ್ ರಾಧಾಕೃಷ್ಣ ರೈ, ಉಪಾಧ್ಯಕ್ಷ, ದ.ಕ. ಜಿಲ್ಲಾ ಬಿಜೆಪಿ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top