ಭಾನುವಾರ ದುಬೈಯಲ್ಲಿ ನಡೆಯಲಿದೆ ಹೈ ವೋಲ್ಟೇಜ್ ಫೈನಲ್ ಕದನ
ದುಬೈ: ನಿನ್ನೆ ನಡೆದ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದು ನ್ಯೂಜಿಲ್ಯಾಂಡ್ ತಂಡ ಫೈನಲ್‌ಗೆ ಪ್ರವೇಶಿಸಿರುವುದರೊಂದಿಗೆ ಭಾರತವನ್ನು ಎದುರಿಸಲು ವೇದಿಕೆ ಸಿದ್ಧವಾಗಿದೆ. ಭಾನುವಾರ ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿದೆ. ಮೊದಲ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಟೀಮ್ ಇಂಡಿಯಾ ಫೈನಲ್ಗೇರಿದರೆ, ದ್ವಿತೀಯ ಸೆಮಿಫೈನಲ್ನಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಸೋಲುಣಿಸಿ ನ್ಯೂಝಿಲೆಂಡ್ ಫೈನಲ್ ಫೈಟ್ಗೆ ಎಂಟ್ರಿ ಕೊಟ್ಟಿದೆ.
ಐಸಿಸಿ ಟೂರ್ನಿಯ ಫೈನಲ್ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಮುಖಾಮುಖಿಯಾಗುತ್ತಿರುವುದು ಇದು ಮೂರನೇ ಬಾರಿ. ಈ ಹಿಂದಿನ ಎರಡೂ ಫೈನಲ್ಗಳಲ್ಲೂ ಕಿವೀಸ್ ಪಡೆ ಭಾರತದ ವಿರುದ್ಧ ಜಯ ಸಾಧಿಸಿತ್ತು.
2000ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮೊದಲ ಬಾರಿ ಭಾರತ ಮತ್ತು ನ್ಯೂಜಿಲ್ಯಾಂಡ್ ಮುಖಾಮುಖಿಯಾಗಿತ್ತು. ಈ ವೇಳೆ ಟೀಮ್ ಇಂಡಿಯಾವನ್ನು 4 ವಿಕೆಟ್ಗಳಿಂದ ಸೋಲಿಸಿ ನ್ಯೂಜಿಲ್ಯಾಂಡ್ ಚೊಚ್ಚಲ ಐಸಿಸಿ ಟ್ರೋಫಿ ಮುಡಿಗೇರಿಸಿಕೊಂಡಿತ್ತು.
ಇದಾದ ಬಳಿಕ ಉಭಯ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಿದ್ದು 2021ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂತಿಮ ಪಂದ್ಯದಲ್ಲಿ. ಈ ಮ್ಯಾಚ್ನಲ್ಲಿ ಭಾರತ ತಂಡಕ್ಕೆ 8 ವಿಕೆಟ್ಗಳ ಸೋಲುಣಿಸಿ ನ್ಯೂಜಿಲ್ಯಾಂಡ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಇದೀಗ ಮೂರನೇ ಬಾರಿಗೆ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಫೈನಲ್ ಫೈಟ್ಗೆ ಸಜ್ಜಾಗಿವೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಎರಡು ಫೈನಲ್ ಸೋಲುಗಳಿಗೆ ಟೀಮ್ ಇಂಡಿಯಾ ಸೇಡು ತೀರಿಸಿಕೊಳ್ಳಲಿದೆಯಾ ಅಥವಾ ನ್ಯೂಜಿಲ್ಯಾಂಡ್ ಹ್ಯಾಟ್ರಿಕ್ ಫೈನಲ್ ಜಯ ಸಾಧಿಸಲಿದೆಯಾ ಎಂಬ ಕುತೂಹಲ ಇದೆ.
ನ್ಯೂಝಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ವಿಲ್ ಒರೂಕ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ನಾಥನ್ ಸ್ಮಿತ್, ಕೇನ್ ವಿಲಿಯಮ್ಸನ್, ವಿಲ್ ಯಂಗ್, ಜಾಕೋಬ್ ಡಫಿ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್. ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.