ಗೋಲ್ಡ್ ಸ್ಮಗ್ಲಿಂಗ್ ಗ್ಯಾಂಗಿಗಾಗಿ ಕೆಲಸ ಮಾಡುತ್ತಿರುವ ಅನುಮಾನ
ಬೆಂಗಳೂರು : ವಿದೇಶದಿಂದ ಚಿನ್ನ ಕಳ್ಳಸಾಗಾಟ ಮಾಡಿದ ಕೇಸ್‌ನಲ್ಲಿ ಸೆರೆಯಾಗಿರುವ ಕನ್ನಡದ ನಟಿ ರನ್ಯಾ ರಾವ್ ಹಿಂದೆ ಗೋಲ್ಡ್ ಸ್ಮಗ್ಲಿಂಗ್‌ನ ವ್ಯವಸ್ಥಿತ ಜಾಲವೊಂದು ಇರುವ ಬಗ್ಗೆ ಡಿಆರ್‌ಐ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ನಟಿ ಕಳೆದ 15 ದಿನಗಳಲ್ಲಿ ನಾಲ್ಕು ಬಾರಿ ಗಲ್ಫ್ ದೇಶಕ್ಕೆ ಹೋಗಿ ಬಂದಿದ್ದಳಂತೆ. ವಿಮಾನ ನಿಲ್ದಾಣದಲ್ಲಿ ಹಿರಿಯ ಅಧಿಕಾರಿಗಳು ಬಳಸುವ ಅಫಿಷಿಯಲ್ ಪ್ರೊಟೊಕಾಲ್ ಸರ್ವೀಸ್ ಬಳಸಿ ಸೆಕ್ಯುರಿಟಿ ಚೆಕ್‌ನಿಂದ ತಪ್ಪಿಸಿಕೊಳ್ಳುತ್ತಿದ್ದಳು. ಪ್ರತಿಬಾರಿ ಚಿನ್ನ ಕಳ್ಳಸಾಗಾಟಕ್ಕೆ ಹೋದಾಗಲು ಒಂದೇ ರೀತಿಯ ಬಟ್ಟೆ ಹಾಕಿಕೊಂಡು ಹೋಗುತ್ತಿದ್ದಳು. ಬೆಲ್ಟ್‌ನ ಒಳಗೆ ಚಿನ್ನದ ಗಟ್ಟಿಗಳನ್ನು ಇಟ್ಟುಕೊಂಡು, ಆ ಬೆಲ್ಟ್ ಹೊರಗೆ ಕಾಣದಂತೆ ಬಟ್ಟೆ ಹಾಕಿಕೊಂಡು ಬರುತ್ತಿದ್ದಳು ಎಂಬುದನ್ನು ಅಧಿಕಾರಿಗಳು ತನಿಖೆಯಿಂದ ಪತ್ತೆಹಚ್ಚಿದ್ದಾರೆ. ಇಷ್ಟು ನಾಜೂಕಾಗಿ ಚಿನ್ನ ಕಳ್ಳ ಸಾಗಾಟ ಮಾಡಬೇಕಾದರೆ ಇದರ ಹಿಂದೆ ಸ್ಮಗ್ಲಿಂಗ್‌ನ ದೊಡ್ಡ ಗ್ಯಾಂಗ್ ಇರಲೇ ಬೇಕು ಎಂದು ಅಧಿಕಾರಿಗಳು ತರ್ಕಿಸಿದ್ದಾರೆ.
ಬಹಳ ಸಮಯದಿಂದ ರನ್ಯಾ ಈ ತಂತ್ರ ಬಳಸಿ ಚಿನ್ನ ಕಳ್ಳ ಸಾಗಾಟ ಮಾಡುತ್ತಿದ್ದರೂ ಯಾರಿಗೂ ಅನುಮಾನ ಬಂದಿರಲಿಲ್ಲ. ಆದರೆ ದೆಹಲಿಯಲ್ಲಿ ಕೂತಿದ್ದ ಡಿಆರ್‌ಐ ಅಧಿಕಾರಿಗಳಿಗೆ ಅನುಮಾನ ಬಂದು ತಪಾಸಣೆ ನಡೆದಾಗ ನಟಿಯ ಕಳ್ಳತನಬಯಲಾಗಿದೆ.ನಿನ್ನೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.20 ಕೆಜಿ ಚಿನ್ನ ಕಳ್ಳಸಾಗಾಟ ಮಾಡುವಾಗ ರನ್ಯಾ ಸಿಕ್ಕಿಬಿದ್ದಿದ್ದಾಳೆ. ತನಿಖೆ ಮುಂದುವರಿದಂತೆ ಆಕೆಯ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿಗಳು ಹೊರಬರುತ್ತಿವೆ. ನಟಿಯನ್ನು ಮಾ.18ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಟಿಯ ಬಳಿಯಿಂದ ಚಿನ್ನ, ನಗದು ಸೇರಿ 17.29 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಮೊತ್ತದ ಚಿನ್ನ ವಶಪಡಿಸಿಕೊಂಡಿರುವುದು ಇದೇ ಮೊದಲು ಎನ್ನಲಾಗಿದೆ. ಡಿಆರ್‌ಐ ಅಧಿಕಾರಿಗಳು ರನ್ಯಾ ಬಂಧನ ಬಳಿಕ ಆಕೆಯ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಅಲ್ಲೂ ಚಿನ್ನ ಮತ್ತು ನಗದು ಸಿಕ್ಕಿದೆ. ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯ ನಂದವಾಣಿ ಮ್ಯಾನ್ಶನ್ನ ಫ್ಲ್ಯಾಟ್ನಲ್ಲಿ ರನ್ಯಾ ಮನೆ ಇದ್ದು, 5ಕ್ಕೂ ಹೆಚ್ಚು ಅಧಿಕಾರಿಗಳು ಫ್ಲ್ಯಾಟ್ನಲ್ಲಿ ಪರಿಶೀಲನೆ ನಡೆಸಿದ್ದರು. 3 ದೊಡ್ಡ ಪೆಟ್ಟಿಗೆಯಲ್ಲಿ ನಗದು ಹಣ ಮತ್ತು ಚಿನ್ನವನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದರು. ರನ್ಯಾ ಮನೆಯಲ್ಲಿ 2.06 ಕೆಜಿ ಚಿನ್ನ ಹಾಗೂ 2.67 ಕೋಟಿ ನಗದು ಹಣ ಪತ್ತೆಯಾಗಿದೆ.
ಕನ್ನಡದ ‘ಮಾಣಿಕ್ಯ’ ಮತ್ತು ‘ಪಟಾಕಿ’ ಸಿನಿಮಾಗಳಲ್ಲಿ ಈಕೆ ನಟಿಸಿದ್ದಾಳೆ. ತಮಿಳಿನ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾಳೆ. ಆದರೆ ಬಳಿಕ ಯಶಸ್ಸು ಮರೀಚಿಕೆಯಾಗಿ ಅಡ್ಡದಾರಿ ಹಿಡಿದಿದ್ದಾಳೆ ಎನ್ನಲಾಗಿದೆ. ಈಕೆಯ ಹಿಂದೆ ಇರುವ ಗ್ಯಾಂಗ್ ಯಾವುದು? ಚಿನ್ನವನ್ನು ಆಕೆ ಯಾರಿಗೆ ತಲುಪಿಸುತ್ತಿದ್ದಳು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ತನಿಖೆ ನಡೆಯುತ್ತಿದೆ. ರನ್ಯಾಳ ಮಲತಂದೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದಾರೆ. ಅಧಿಕಾರಿಯ ಮೊದಲ ಹೆಂಡತಿಯ ಮೊದಲ ಪತಿಯ ಮಗಳು ರನ್ಯಾ. ಆಕೆ ನಮ್ಮ ಗೌರವ ಮಣ್ಣುಪಾಲು ಮಾಡಿದ್ದಾಳೆ, ಆಕೆ ಕೆಲ ತಿಂಗಳ ಹಿಂದೆ ಆರ್ಕಿಟೆಕ್ಟ್ ಒಬ್ಬರನ್ನು ವಿವಾಹವಾಗಿದ್ದು ಆಗಿನಿಂದಲೂ ನಮ್ಮೊಂದಿಗೆ ಸಂಬಂಧದಲ್ಲಿಲ್ಲ. ಆಕೆ ತಪ್ಪಿಗೆ ಶಿಕ್ಷೆ ಆಗಲಿ ಎಂದು ಈ ಪೊಲೀಸ್ ಅಧಿಕಾರಿ ಹೇಳಿಕೆ ಕೊಟ್ಟಿದ್ದಾರೆ.