ತಿಂಗಳಿಗೆ 4.5 ಲ.ರೂ. ಬಾಡಿಗೆಯ ಐಷರಾಮಿ ಫ್ಲ್ಯಾಟ್ನಲ್ಲಿ ವಾಸವಾಗಿರುವ ರನ್ಯಾ ರಾವ್
ಬೆಂಗಳೂರು: ದುಬೈಯಿಂದ ಸುಮಾರು 15 ಕೆಜಿ ಚಿನ್ನ ಅಕ್ರಮವಾಗಿ ತಂದು ವಿಮಾನ ನಿಲ್ದಾಣದಲ್ಲಿ ಡಿಆರ್ಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಕನ್ನಡದ ನಟಿ ರನ್ಯಾ ರಾವ್ ಫ್ಲ್ಯಾಟ್ನಲ್ಲೂ ಕೋಟಿಗಟ್ಟಲೆ ಮೌಲ್ಯದ ಚಿನ್ನ ಮತ್ತು ನಗದು ಸಿಕ್ಕಿದೆ.
ನಟಿ ರನ್ಯಾ ರಾವ್ ಬಹಳ ಕಾಲದಿಂದ ಚಿನ್ನ ಸ್ಮಗ್ಲಿಂಗ್ಗನ್ನಲಿ ಭಾಗಿಯಾಗಿದ್ದಾಳೆ ಎನ್ನುವ ಅನುಮಾನ ಮೂಡಿದೆ. ನಿನ್ನೆ ರಾತ್ರಿ ಡಿಆರ್ಐ ಅಧಿಕಾರಿಗಳು ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯಲ್ಲಿರುವ ನಟಿಯ ಫ್ಲ್ಯಾಟ್ಗೆ ದಾಳಿ ಮಾಡಿದಾಗ 2.06 ಕೋಟಿ ಮೌಲ್ಯದ ಚಿನ್ನ ಸಿಕ್ಕಿದೆ. ಜೊತೆಗೆ 2.67 ಕೋಟಿ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನಂದವಾಣಿ ಮ್ಯಾನ್ಸನ್ನಲ್ಲಿರುವ ಫ್ಲ್ಯಾಟ್ನಲ್ಲಿ ನಟಿ ರಾವ್ ಬಹಳ ಸಮಯದಿಂದ ವಾಸವಿದ್ದಳು. ಈ ಫ್ಲ್ಯಾಟ್ನ ತಿಂಗಳ ಬಾಡಿಗೆ 4.5 ಲಕ್ಷ ರೂ. ಯಾವುದೇ ಕೆಲಸವಿಲ್ಲದ ನಟಿ ಇಷ್ಟು ದುಬಾರಿ ಬಾಡಗೆಯ ಫ್ಲ್ಯಾಟ್ನಲ್ಲಿ ವಾಸವಾಗಿರುವುದು ಹೇಗೆ ಎಂಬ ಅನುಮಾನ ಮೂಡಿದೆ.
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ ನಿನ್ನೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆರೆಯಾಗಿದ್ದಾಳೆ.
ದುಬೈಯಿಂದ ತಂದ ಕೋಟಿಗಟ್ಟಲೆ ರೂ. ಮೌಲ್ಯದ 14.8 ಕೆಜಿ ಚಿನ್ನ ಅವಳ ಬಳಿ ಪತ್ತೆಯಾಗಿತ್ತು. ಈಕೆ ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಮಲಮಗಳು ಎನ್ನಲಾಗಿದೆ. ಮೂಲತಃ ಚಿಕ್ಕಮಗಳೂರಿನವಳು. ಸುದೀಪ್ ಎದುರು ಮಾಣಿಕ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪ್ರಸಿದ್ಧಿಗೆ ಬಂದಿದ್ದಳು. ಬಳಿಕ ಒಂದೆರಡು ತಮಿಳು ಚಿತ್ರಗಳಲ್ಲಿ ನಟಿಸಿದ್ದರೂ ನಂತರ ಅವಕಾಶಗಳಿಲ್ಲದೆ ಮೂಲೆಗುಂಪಾಗಿದ್ದಳು. ಈಗ ಚಿನ್ನ ಕಳ್ಳಸಾಗಾಟ ಮಾಡಿ ಸಿಕ್ಕಿಬಿದ್ದು ಸುದ್ದಿಯಾಗಿದ್ದಾಳೆ. ನ್ಯಾಯಾಲಯ ಅವಳನ್ನು 14 ದಿನಗಳ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.