ಈ ತಿಂಗಳಿನಿಂದಲೇ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ಉಚಿತ
ಬೆಂಗಳೂರು : ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಫಲಾನುಭವಿಗಳಿಗೆ ಈ ತಿಂಗಳಿನಿಂದ ನಗದು ಹಣ ಸಿಗುವುದಿಲ್ಲ, ಅದರ ಬದಲಾಗಿ 5 ಕೆಜಿ ಅಕ್ಕಿ ಹೆಚ್ಚುವರಿಯಾಗಿ ಸಿಗಲಿದೆ.
ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಕೆಜಿ ಉಚಿತ ಅಕ್ಕಿಯ ಬದಲು ಇಷ್ಟರ ತನಕ ಅದರ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಲಾಗುತ್ತಿತ್ತು. ಆದರೆ ಮಾರ್ಚ್‌ನಿಂದ ಹಣ ಬರುವುದಿಲ್ಲ, ಅದರ ಬದಲಾಗಿ ಅಕ್ಕಿಯನ್ನೇ ನೀಡಲು ಸರಕಾರ ತೀರ್ಮಾನಿಸಿದೆ. ಇನ್ನು ಮುಂದೆ ಕೇಂದ್ರದ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ರಾಜ್ಯದ 5 ಕೆಜಿ ಉಚಿತ ಅಕ್ಕಿ ಸೇರಿ ಒಟ್ಟು ಹತ್ತು ಕೆಜಿ ಅಕ್ಕಿ ಸಿಗಲಿದೆ.
ಫೆಬ್ರವರಿ ಮತ್ತು ಮಾರ್ಚ್ ಎರಡು ತಿಂಗಳಿನದ್ದು ಸೇರಿಸಿ 10 ಕೆ.ಜಿ. ಹೆಚ್ಚುವರಿ ಅಕ್ಕಿ ಮಾರ್ಚ್‌ನಲ್ಲಿ ಕೊಡುತ್ತೇವೆ ಎಂದು ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ 2.90 ಲಕ್ಷ ಪಡಿತರ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡಲಾಗಿದೆ. ಇವುಗಳಲ್ಲಿ 1.65 ಲಕ್ಷ ಕಾರ್ಡ್‌ಗಳನ್ನು ಬದಲಾವಣೆ ಮಾಡಲಾಗಿದೆ. 10 ಕೆ.ಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಆಗ ಕೇಂದ್ರ ಸರ್ಕಾರ ಮತ್ತು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಅಕ್ಕಿ ನೀಡಲಿಲ್ಲ. ಈಗ ಅಕ್ಕಿ ಕೊಡಲು ಮುಂದೆ ಬಂದಿದ್ದಾರೆ. ಆದ್ದರಿಂದ ಫೆಬ್ರವರಿಯಿಂದಲೇ ಹಣದ ಬದಲು ಅಕ್ಕಿ ವಿತರಿಸುತ್ತೇವೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನದ್ದು ಸೇರಿಸಿ ಕೊಡುತ್ತೇವೆ ಎಂದು ತಿಳಿಸಿದ್ದಾರೆ.