ಬಸ್ ನಿಲ್ದಾಣದಲ್ಲಿದ್ದ ಅನಾಥ ಸೂಟ್ಕೇಸ್ನಲ್ಲಿತ್ತು ಹೆಣ
ಚಂಡೀಗಢ: ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಶವ ಹರ್ಯಾಣದ ರೋಹ್ಟಕ್ ಜಿಲ್ಲೆಯ ಸಂಪ್ಲಾದ ಬಸ್ ನಿಲ್ದಾಣದಲ್ಲಿ ಸೂಟ್ಕೇಸ್ನೊಳಗೆ ಪತ್ತೆಯಾಗಿದೆ. ಇಲ್ಲಿ ಇಂದು ಸ್ಥಳೀಯಾಡಳಿತ ಚುನಾವಣೆ ನಡೆಯುತ್ತಿದ್ದು, ಇದೇ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತೆಯ ಶವ ಪತ್ತೆಯಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತೆಯನ್ನು ಹಿಮಾನಿ ನರ್ವಾಲ್ (22) ಎಂದು ಗುರುತಿಸಲಾಗಿದೆ. ಕಾಂಗ್ರೆಸ್ನ ಸಕ್ರಿಯ ಕಾರ್ಯಕರ್ತೆಯಾಗಿದ್ದ ಈ ಯುವತಿ ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಯಲ್ಲೂ ಭಾಗವಹಿಸಿದ್ದರು.
ಬಸ್ ನಿಲ್ದಾಣದ ಬಳಿ ಪತ್ತೆಯಾದ ಸೂಟ್ಕೇಸ್ನಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿನ ಕುರಿತು ಉನ್ನತಮಟ್ಟದ ತನಿಖೆಗೆ ಕಾಂಗ್ರೆಸ್ ಆಗ್ರಹಿಸಿದೆ.

ಬಸ್ ನಿಲ್ದಾಣದ ಬಳಿ ದಾರಿಹೋಕರು ಸೂಟ್ಕೇಸ್ ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ವಿಧಿವಿಜ್ಞಾನ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸೂಟ್ಕೇಸ್ನಲ್ಲಿ ಶವ ಇರುವುದನ್ನು ಪತ್ತೆಹಚ್ಚಿದ್ದಾರೆ. ಶವವನ್ನು ಹೊರತೆಗೆದಾಗ ಕುತ್ತಿಗೆ ಭಾಗಕ್ಕೆ ದುಪ್ಪಟ್ಟಾ ಬಿಗಿಯಲಾಗಿತ್ತು. ಹೀಗಾಗಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಹಿಮಾನಿ ನರ್ವಾಲ್ ಅವರು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಪುತ್ರ ಕಾಂಗ್ರೆಸ್ ಸಂಸದ ದೀಪೆಂದರ್ ಸಿಂಗ್ ಹೂಡಾ ಮತ್ತು ಪಕ್ಷದ ಶಾಸಕ ಬಿಬಿ ಬಾತ್ರಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಅವರೊಂದಿಗಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕರು, ಎಸ್ಐಟಿ ತನಿಖೆಗೆ ಆಗ್ರಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.