ಚಾಂಪಿಯನ್ಸ್‌ ಟ್ರೋಫಿ : ಇಂದು ಭಾರತ-ನ್ಯೂಜಿಲ್ಯಾಂಡ್‌ ಪಂದ್ಯ

ಸೆಮಿಫೈನಲ್‌ ತಲುಪಿದ ಎರಡು ತಂಡಗಳ ಮುಖಾಮುಖಿ

ದುಬೈ : ಚಾಂಪಿಯನ್ಸ್ ಟ್ರೋಫಿಯ ಗುಂಪು ಹಂತದ ಕೊನೆಯ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಇಂದು ದುಬೈಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಎರಡೂ ತಂಡಗಳು ಈಗಾಗಲೇ ಸೆಮಿಫೈನಲ್‌ಗೆ ತಲುಪಿವೆ. ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆಯಲು ಎರಡೂ ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ. ಆದಾಗ್ಯೂ, ಮುಂಬರುವ ನಾಕೌಟ್ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಪಂದ್ಯದ ಗೆಲುವು ಉಭಯ ತಂಡಗಳಿಗೆ ಅವಶ್ಯಕವಾಗಿದೆ. ಹೀಗಾಗಿ ಭಾರತ ತಂಡ ಬಲಿಷ್ಠ ಆಡುವ ಹನ್ನೊಂದರ ಬಳಗದೊಂದಿಗೆ ಕಣಕ್ಕಿಳಿಯಬೇಕಿದೆ.
ಈ ಪ<ದ್ಯದಲ್ಲಿ ಭಾರತ ಗೆದ್ದರೆ ಗ್ರೂಪ್-Aಯಲ್ಲಿ ಅಗ್ರಸ್ಥಾನ ಅಲಂಕರಿಸಲಿದೆ. ಅತ್ತ ಗ್ರೂಪ್- Bಯಲ್ಲಿ ಆಸ್ಟ್ರೇಲಿಯಾ ತಂಡ ದ್ವಿತೀಯ ಸ್ಥಾನದಲ್ಲಿದ್ದು ಹೀಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಬಹುದು.
ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಬಹುದು. ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರಿಗೆ ಸ್ವಲ್ಪ ಕಾಲಿನ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಶಮಿಗೆ ವಿಶ್ರಾಂತಿ ನೀಡಿದರೆ ಆರ್ಷದೀಪ್ ಸಿಂಗ್‌ಗೆ ಆಡಲು ಅವಕಾಶ ಸಿಗಬಹುದು. ಆರ್ಷದೀಪ್ ಅಭ್ಯಾಸದ ವೇಳೆ ಬೌಲಿಂಗ್ ತರಬೇತುದಾರ ಮಾರ್ನೆ ಮಾರ್ಕೆಲ್ ಅವರೊಂದಿಗೆ ಸಾಕಷ್ಟು ಸಮಯ ಕಳೆಯುವುದರೊಂದಿಗೆ 13 ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಮತ್ತೊಂದೆಡೆ ಶಮಿ ಕೇವಲ ಆರು-ಏಳು ಓವರ್‌ಗಳನ್ನು ಬೌಲಿಂಗ್ ಮಾಡಿದರು.
ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರೋಹಿತ್ ಶರ್ಮಾ ಕೂಡ ಗಾಯಗೊಂಡಿದ್ದರು. ಅವರಿಗೆ ಮಂಡಿರಜ್ಜು ಗಾಯವಾಗಿತ್ತು. ರೋಹಿತ್‌ಗೆ ವಿಶ್ರಾಂತಿ ನೀಡಿದರೆ, ರಿಷಭ್ ಪಂತ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯಬಹುದು. ಆರ್ಷ್​ದೀಪ್ ಸಿಂಗ್ ಮತ್ತು ರಿಷಭ್ ಪಂತ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಇನ್ನೂ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಈ ಆಟಗಾರರಿಗೆ ಅವಕಾಶ ಸಿಕ್ಕರೆ ಇದು ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರ ಚೊಚ್ಚಲ ಪಂದ್ಯವಾಗಲಿದೆ.
ರೋಹಿತ್ ಶರ್ಮಾ ಪಂದ್ಯದಿಂದ ಹೊರಗುಳಿದರೆ, ಬ್ಯಾಟಿಂಗ್ ಕ್ರಮಾಂಕದಲ್ಲೂ ಬದಲಾವಣೆ ಇರುತ್ತದೆ. ಶುಭ್​ಮನ್ ಗಿಲ್ ಜೊತೆ ಕೆ.ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸುವುದನ್ನು ಕಾಣಬಹುದು. ಪ್ರಸ್ತುತ ಕೆ.ಎಲ್ ರಾಹುಲ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ ಅವರಿಗೆ ಆರಂಭಿಕನಾಗಿಯೂ ಸಾಕಷ್ಟು ಅನುಭವವಿದೆ. ಮತ್ತೊಂದೆಡೆ, ರಿಷಭ್ ಪಂತ್ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top