ನಗರಸಭೆ ವಿಶೇಷ ಸಾಮಾನ್ಯ ಸಭೆ | ನೂತನ ಉದ್ಯಮ ಪರವಾನಗಿ ಬೈಲಾ ರಚನೆ

ಪುತ್ತೂರು: ನಗರಸಭೆ ವಿಶೇಷ ಸಾಮಾನ್ಯ ಸಭೆ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ನಡೆಯಿತು.

ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉದ್ಯಮ ಪರವಾನಗಿ ಶುಲ್ಕ ಮತ್ತು ಉದ್ಯಮಗಳ ಘನತ್ಯಾಜ್ಯ ವಿಲೇವಾರಿಗಾಗಿ ವಿಧಿಸಲಾಗುತ್ತಿದ್ದ ಶುಲ್ಕದಲ್ಲಿ ಉಂಟಾಗಿದ್ದ ತಾರತಮ್ಯ ನಿವಾರಿಸಿ ನೂತನ ಉದ್ಯಮ ಪರವಾನಗಿ ಬೈಲಾವನ್ನು ಪುತ್ತೂರು ನಗರಸಭೆ ರಚಿಸಿದ್ದು, ಇದರ ಅನುಷ್ಠಾನಕ್ಕೆ ಮಂಜೂರಾತಿ ನೀಡಲಾಯಿತು.

ಸಭೆಯಲ್ಲಿ ಬೈಲಾ ಕರಡು ಪ್ರತಿಯ ಮೇಲೆ ಸುದೀರ್ಘ ಚರ್ಚೆ ನಡೆದು ಅಂಗೀಕರಿಸಲಾಯಿತು. ಪೌರಾಯುಕ್ತ ಮಧು ಎಸ್. ಮನೋಹರ್ ಬೈಲಾದಲ್ಲಿರುವ ಅಂಶಗಳನ್ನು ಸಭೆಗೆ ವಿವರಿಸಿದರು.  ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಅಂತಿಮವಾಗಿ ಸಭೆ ನೂತನ ಬೈಲಾಕ್ಕೆ ಅನುಮೋದನೆ ನೀಡಿದ್ದು, 2025  ಏ.1 ರಿಂದ ಜಾರಿಯಾಗಲಿದೆ ಎಂದು ತಿಳಿಸಲಾಯಿತು.

































 
 

ನಗರಸಭೆ ವ್ಯಾಪ್ತಿಯ ಉದ್ಯಮ ಪರವಾನಗಿ ಶುಲ್ಕ- ಘನತ್ಯಾಜ್ಯ ವಿಲೇವಾರಿ ಶುಲ್ಕವನ್ನು 2025-26ನೇ ಸಾಲಿನಿಂದ ಪರಿಷ್ಕರಿಸುವ ಕುರಿತು ಕರಡು ಬೈಲಾ ರಚಿಸಿ 2024, ಡಿ.24 ರ ಕೌನ್ಸಿಲ್ ಸಭೆಯಲ್ಲಿ ಮಂಡಿಸಲಾಗಿತ್ತು. ಸಭೆಯ ನಿರ್ಣಯದಂತೆ 7 ಸದಸ್ಯರ ಉಪ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ವರ್ತಕರ ಸಂಘದ ಜತೆ ಚರ್ಚಿಸಿ, ಅಭಿಪ್ರಾಯ ಪಡೆದುಕೊಂಡಿದ್ದು, ನಿರಂತರ ಸಭೆ ನಡೆಸಿ ಸಮಾಲೋಚಿಸಿದೆ. ಸಂಪೂರ್ಣ ಅಧ್ಯಯನ ಮಾಡಿ ರಚಿಸಲಾದ ಬೈಲಾವು ಉದ್ಯಮ ಪರವಾನಗಿ ಮತ್ತು ಘನತ್ಯಾಜ್ಯ ಶುಲ್ಕದಲ್ಲಿದ್ದ ತಾರತಮ್ಯವನ್ನು ನಿವಾರಿಸಿದೆ. ವರ್ತಕರಿಗೆ ನ್ಯಾಯ ಕೊಟ್ಟಿದೆ ಮಾತ್ರವಲ್ಲದೆ, ನಗರಭೆಗೆ ಆದಾಯವನ್ನೂ ತರಲಿದೆ ಎಂದು ಪೌರಾಯುಕ್ತರು ಹೇಳಿದರು.

ಪುತ್ತೂರಿನಲ್ಲಿ ಒಟ್ಟು 384 ಬಗೆಯ ಉದ್ಯಮಗಳಿವೆ. 104 ಉದ್ಯಮಗಳನ್ನು ಸೇರಿಸಲಾಗಿದೆ. ಇವುಗಳನ್ನೆಲ್ಲ ವೈಜ್ಞಾನಿಕವಾಗಿ ವಿಂಗಡಿಸಿ ಒಟ್ಟು 10 ವಿಭಾಗದಲ್ಲಿ ಅಳವಡಿಸಲಾಗಿದೆ. ಎಲ್ಲದಕ್ಕೂ ಕೋಡ್ ನೀಡಲಾಗಿದೆ. ಪ್ರತೀ ವಿಭಾಗದ ಉದ್ಯಮಗಳಿಗೆ ಗಾತ್ರದ ಪ್ರಕಾರ ಶುಲ್ಕ ಅಳವಡಿಸಿ, ಅದಕ್ಕೆ ಪ್ರತ್ಯೇಕ ಸ್ಲ್ಯಾಬ್ ನಿಗದಿ ಮಾಡಲಾಗಿದೆ. ಇದರೊಂದಿಗೆ ಆಯಾ ಉದ್ಯಮಗಳಿಂದ ತ್ಯಾಜ್ಯ ಪಡೆಯುವುದಕ್ಕೂ ಶುಲ್ಕ ವಿಧಿಸಲಾಗಿದೆ. ೨೧ ಬಗೆಯ ಷರತ್ತು ವಿಧಿಸಲಾಗಿದೆ. ದಂಡ ವಿಧಿಸುವ ಅವಕಾಶವನ್ನೂ ನೀಡಲಾಗಿದೆ. ತ್ಯಾಜ್ಯ ವಿಂಗಡಣೆಯನ್ನು ಕಡ್ಡಾಯ ಮಾಡುವ ರೀತಿಯಲ್ಲಿ ಬೈಲಾ ರಚಿಸಲಾಗಿದೆ. ಇದು ವರ್ತಕ ಸ್ನೇಹಿ ಬೈಲಾವಾಗಿದೆ ಎಂದು ಪೌರಾಯುಕ್ತರು ಹೇಳಿದರು.

ಕೌನ್ಸಿಲರ್ ವಿದ್ಯಾಗೌರಿ, ಪಿ.ಜಿ. ಜಗನ್ನಿವಾಸ ರಾವ್, ಗೌರಿ ಬನ್ನೂರು, ಸಂತೋಷ್ ಕುಮಾರ್, ದೀಕ್ಷಾ ಪೈ, ಮನೋಹರ್, ರಾಬಿನ್ ತಾವ್ರೋ ಮಾತನಾಡಿದರು. ಪುತ್ತೂರು ನಗರಸಭೆಯಲ್ಲಿ ಇಡೀ ಜಿಲ್ಲೆಗೆ ಮಾದರಿ ಎನಿಸುವ ಬೈಲಾ ರಚಿಸಲಾಗಿದೆ ಎಂದು ಉಪಾಧ್ಯಕ್ಷರಾದ ಬಾಲಚಂದ್ರ ಕೆಮ್ಮಿಂಜೆ ಹೇಳಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top