ಪುತ್ತೂರು: ಪ್ರತಿಷ್ಠಿತ ಆಂಕಾರು ಸಿ.ಎ. ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಗೆ ದಿನನಿಗದಿಯಾಗಿದ್ದು, ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯಿಂದ ಅಧಿಕೃತವಾಗಿ ಈಗಾಗಲೇ 12 ಮಂದಿಯನ್ನು ಚುನಾವಣಾ ಕಣಕ್ಕೆ ಇಳಿಸಲಾಗಿದೆ. ಈ ನಡುವೆ ಬಿಜೆಪಿಯ ಮತ್ತೊಂದು ತಂಡ ಸಹಕಾರ ಭಾರತಿಗೆ ವಿರುದ್ಧವಾಗಿ 12 ಮಂದಿಯನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು, ಸಹಕಾರ ಭಾರತಿಯ ಅಧಿಕೃತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿ ಸುಳ್ಯ ಬಿಜೆಪಿ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಳ್ಯ ಹಾಗೂ ಕಡಬ ವ್ಯಾಪ್ತಿಯನ್ನೊಳಗೊಂಡಿರುವ ಕಡಬ ತಾಲೂಕಿನ ಪ್ರತಿಷ್ಠಿತ ಆಲಂಕಾರು ಸಿಎ ಬ್ಯಾಂಕ್ ಆಡಳಿತ ಮಂಡಳಿಗೆ ಮಾ.2 ರಂದು ಚುನಾವಣೆ ನಡೆಯಲಿದೆ. ಕಳೆದ 28 ವರ್ಷಗಳಿಂದ ಆಲಂಕಾರು ಸಿಎ ಬ್ಯಾಂಕ್ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಆಡಳಿತದ ತೆಕ್ಕೆಯಲ್ಲಿದ್ದು, ಹಲವಾರು ಉತ್ತಮ ಕಾರ್ಯಗಳನ್ನು ಹಮ್ಮಿಕೊಂಡು ಈ ಮೂಲಕ ಪಾರದರ್ಶಕ ಆಡಳಿತ ನಡೆಸುತ್ತಾ ಬಂದಿದೆ. ಆದರೆ ಈ ಬಾರಿ ಅಧಿಕೃತ ಅಭ್ಯರ್ಥಿಗಳ ಘೋಷಣೆಯಾದರೂ ಚುನಾವಣೆ ಸಂದರ್ಭದಲ್ಲಿ ಸಹಕಾರಿ ಭಾರತಿ ಬೆಂಬಲಿತರೇ ಆದ ವೈಯಕ್ತಿಕ ಹಿತಾಶಕ್ತಿಯಿಂದ ತಮ್ಮ ಇನ್ನೊಂದು ತಂಡ ಕಟ್ಟಿಕೊಂಡು 12 ಅಭ್ಯರ್ಥಿಗಳ ಪಟ್ಟಿ ತಯಾರಿಸಿ 12 ಸ್ಥಾನಗಳನ್ನು ಅಧಿಕೃತವಾಗಿ ತಮಗೇ ನೀಡಬೇಕು ಎಂದು ಆಗ್ರಹಿಸಿದೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ತನ್ನದೇ ಆದ ತತ್ವಗಳನ್ನು ಹೊಂದಿದ್ದು, ಈ ತತ್ವದಡಿ, ಕಾರ್ಯಕರ್ತರ ಬೇಸಲ್ಲಿ ಹೋಗುವಂತದ್ದು. ಅದನ್ನು ಬಿಟ್ಟು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಬಂಡಾಯವಾಗಿ ತನ್ನ ಅಭ್ಯರ್ಥಿಗಳ ಪಟ್ಟಿ ಮಾಡಿ ತಮಗೇ ಅವಕಾಶ ನೀಡಿ ಎಂದು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದರು.
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಧಿಕೃತ ಅಭ್ಯರ್ಥಿಗಳಲ್ಲಿ ಪ್ರಾಮಾಣಿಕರನ್ನು ಆರಿಸಿದ್ದು, ಸಾಲಗಾರರ ಕ್ಷೇತ್ರದಿಂದ 1643 ಹಾಗೂ ಸಾಲಗಾರರಲ್ಲದವರು 440 ಒಟ್ಟು 2083 ಮತದಾರರಿದ್ದಾರೆ. ಈಗಾಗಲೇ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕೆಂದು ಆರು ಗ್ರಾಮಗಳನ್ನು ಭೇಟಿ ಮಾಡಿ ಮತದಾರರಲ್ಲಿ ಮನವಿ ಮಾಡಿದ್ದೇವೆ. ಅದರಂತೆ ಗೆಲುವು ಏನಿದ್ದರೂ ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಶಿವಪ್ರಸಾದ್ ನಡುತೋಟ, ಸಿಎ ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಕೊಯಿಲ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿಪ್ರಸಾದ್, ಕುಟ್ರುಪ್ಪಾಡಿ ಶಕ್ತಿ ಕೇಂದ್ರದ ಸುರೇಶ್ ದೆಂತಾರ್, ಪ್ರದೀಪ್ ರೈ ಮನವಳಿಕೆ ಉಪಸ್ಥಿತರಿದ್ದರು.