ಕಡಬ: ತಾಲೂಕಿನ ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 25ನೇ ವರ್ಷದ ಮಹಾಶಿವರಾತ್ರಿ ಉತ್ಸವ ‘ರಜತ ಪಥ’ ಬುಧವಾರ ನಡೆಯಿತು.
ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಬೆಳಿಗ್ಗೆ 6.30 ರಿಂದ ಅರ್ಧ ಏಕಾಹ ಭಜನೆ, ಬ್ರಹ್ಮಶ್ರೀ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 7.30 ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಏಕಾದಶ ರುದ್ರಾಭಿಷೇಕ, ಶ್ರೀ ಪಂಚಲಿಂಗೇಶ್ವರ ದೇವರಿಗೆ ರಜತ ಕವಚ ಸಮರ್ಪಣೆ, ಶ್ರೀ ರುದ್ರಯಾಗದ ಪ್ರಾರಂಭ, ಮಧ್ಯಾಹ್ನ 12.30 ಕ್ಕೆ ರುದ್ರ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಿತು.
ರಾತ್ರಿ 8 ಗಂಟೆಗೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ದಯಾನಂದ ಜಿ.ಕತ್ತಲ್ಸಾರ್ ಧಾರ್ಮಿಕ ಉಪನ್ಯಾಸ ನೀಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಬದಲು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಹೆಚ್ಚಾಗುತ್ತಿದೆ. ಸಂಸ್ಕೃತಿಯೊಂದಿಗೆ ಮನುಷ್ಯನಲ್ಲಿ ಇರಬೇಕಾದ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿದೆ. ಹಿರಿಯರ ಪ್ರತಿಯೊಂದು ಕೆಲಸವನ್ನೂ ಮಕ್ಕಳು ಅನುಕರಣೆ ಮಾಡಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಸಂಸ್ಕಾರಯುತ ಬದುಕು ಕಂಡುಕೊಳ್ಳಲು ಪೋಷಕರ ಪಾತ್ರ ಅಗತ್ಯವಾಗಿರುತ್ತದೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಸಿಕ್ಕಾಗ ಭವಿಷ್ಯದಲ್ಲಿ, ಸ್ವಾಸ್ಥ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದ ಅವರು, ಸನಾತನ ಹಿಂದೂ ಧರ್ಮ ಹಾಗೂ ನಮ್ಮ ಸಾಂಪ್ರಾದಾಯಿಕ ಕಟ್ಟುಪಾಡುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನಾವೆಲ್ಲಾ ಒಂದಾಗಿ ಕಟಿ ಬದ್ಧರಾಗಿ ಸಂಕಲ್ಪ ಮಾಡಬೇಕಾಗಿದೆ. ಮಾನವೀಯ ಮೌಲ್ಯಗಳ ಜೊತೆಗೆ ಧರ್ಮವನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ, ಕೇಪುಳೇಶ್ವರ ದೇವಸ್ಥಾನದ ಮಹಾಶಿವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಬರೆಪ್ಪಾಡಿ ಮಾತನಾಡಿ, ಬರೆಪ್ಪಾಡಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವು ನಡೆಯುತ್ತಿದ್ದು, ಶೀಘ್ರದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳಲು ಊರ ಪರವೂರ ಭಕ್ತರ ಸಹಕಾರ ಅಗತ್ಯ ಎಂದರು.
ವೇದಿಕೆಯಲ್ಲಿ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ, ಕೇಪುಳೇಶ್ವರ ದೇವಸ್ಥಾನದ ಅನುವಂಶೀಯ ಮೊತ್ತೇಸರರು, ಪ್ರಧಾನ ಅರ್ಚಕರಾದ ಜನೇಶ್ ಭಟ್ ಬರೆಪ್ಪಾಡಿ, ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ಭಾಸ್ಕರ ಪೂಜಾರಿ ಕೊಡಂಗೆ, ನಿಕಟಪೂರ್ವ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ಅಂಕಲ್ ಸ್ವೀಟ್ಸ್ ಮಾಲಕ ಕುಶಾಲಪ್ಪ ಗೌಡ ಕಾರ್ಲಾಡಿ, ಉದ್ಯಮಿ ಧರ್ಣಪ್ಪಗೌಡ ಅಂಬುಲ, ಉತ್ಸವ ಸಮಿತಿ ಉಪಾಧ್ಯಕ್ಷ ವಸಂತ ಪೂಜಾರಿ ಕೆಲಂಬೀರಿ ಉಪಸ್ಥಿತರಿದ್ದರು. ಆನಂದ ಕೂಂಕ್ಯ, ದಿನೇಶ್ ಮೆದು, ಸುರೇಶ್ ರೈ ಸೂಡಿಮುಳ್ಳು, ನಾಗೇಶ್ ಕೆಡೆಂಜಿ, ಕೇಶವ ಗೌಡ ಅಮ್ಮೆ, ಚಂದ್ರ ತೆಕ್ಕಿತ್ತಡಿ, ಸುಗುಣ ಭಟ್, ಪ್ರಶಾಂತ್ ಬರೆಪ್ಪಾಡಿ, ಲೋಕೇಶ್ ಬಿ.ಎನ್. ಅತಿಥಿಗಳನ್ನು ಗೌರವಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಶಂಕರ ಸುಲಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಕೇಶ್ ಬಿ.ಎನ್ ಸ್ವಾಗತಿಸಿ, ಪುರುಷೋತ್ತಮ್ ಕುಂಡಡ್ಕ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.