13 ತಂಡಗಳಿಂದ 75 ತಾಸುಗಳಲ್ಲಿ ನಿರಂತರ ಹುಡುಕಾಟದ ಬಳಿಕ ಸೆರೆಸಿಕ್ಕ ಆರೋಪಿ
ಪುಣೆ: ಇಲ್ಲಿನ ಸ್ವಾರ್ಗೇಟ್ ಸರಕಾರಿ ಬಸ್ ಡಿಪೊದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು 75 ತಾಸುಗಳ ತೀವ್ರ ಕಾರ್ಯಾಚರಣೆಯ ಬಳಿಕ ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುಣೆಯ ಗುನಾತ್ ಗ್ರಾಮದ ದತ್ತಾತ್ರೇಯ ರಾಮದಾಸ್ ಗಡೆ (37) ಎಂದು ಗುರುತಿಸಲಾಗಿದೆ. ಸುಮಾರು 75 ಗಂಟೆಗಳ ಕಾಲ ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿ, ಶ್ರೀರೂರ್ ತಾಲೂಕಿನಿಂದ ಬಂಧಿಸಿದ್ದಾರೆ.
ಪೊಲೀಸರ ಮೂಗಿನಡಿಯಲ್ಲೇ ನಡೆದ ಈ ಅತ್ಯಾಚಾರ ಪ್ರಕರಣ ದೇಶಾದ್ಯಂತ ಆಕ್ರೋಶದ ಅಲೆ ಎಬ್ಬಿಸಿತ್ತು. ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿ ಅಲ್ಲಲ್ಲಿ ಪ್ರತಿಭಟನೆಗಳು ನಡೆದಿದ್ದವು. ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಅಜಿತ್ ಪವಾರ್ ಮತ್ತು ಏಕನಾಥ ಶಿಂಧೆ ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಪುಣೆ ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿದ್ದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ವಾರ್ಗೇಟ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಆತ ಆರಂಭದಲ್ಲಿ ಮಹಿಳೆಯನ್ನು ಅಕ್ಕ ಎಂದು ಕರೆದು ಮಾತಾಡಿಸಿದ್ದ. ಬಳಿಕ ಸತಾರಾಕ್ಕೆ ಹೋಗುವ ಬಸ್ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿ, ನಿಲ್ಲಿಸಿದ್ದ ಖಾಲಿ ಬಸ್ ಬಳಿ ಕರೆದೊಯ್ದಿದ್ದ. ಮಹಿಳೆ ಲೈಟ್ ಇರದ ಕಾರಣ ಬಸ್ ಹತ್ತಲು ಹಿಂಜರಿದಿದ್ದಳು. ಆದರೆ ಆರೋಪಿ ಇದೇ ಸರಿಯಾದ ಬಸ್ ಎಂದು ಹೇಳಿ ಒಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಆರೋಪಿಯು ಹಲವಾರು ತಿಂಗಳುಗಳಿಂದ ಪೊಲೀಸರ ಸೋಗಿನಲ್ಲಿ ಓಡಾಡಿಕೊಂಡಿದ್ದ ಎಂದು ಹೇಳಲಾಗಿದೆ. ಆತನ ವಿರುದ್ಧ ಪುಣೆ ಮತ್ತು ಅಹಲ್ಯಾನಗರ ಜಿಲ್ಲೆಗಳಲ್ಲಿ ಕಳ್ಳತನ, ದರೋಡೆ ಮತ್ತು ಸರಗಳ್ಳತನದ ಪ್ರಕರಣಗಳಿವೆ. ಪ್ರಕರಣ ಒಂದರಲ್ಲಿ ಆತ 2019ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆರೋಪಿಯನ್ನು ಬಂಧಿಸಲು ಮಹಾರಾಷ್ಟ್ರದಾದ್ಯಂತ ಒಟ್ಟು 13 ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು. ಶೋಧ ಕಾರ್ಯಾಚರಣೆಯ ಭಾಗವಾಗಿ ಸ್ನಿಫರ್ ಡಾಗ್ಸ್ ಮತ್ತು ಡ್ರೋನ್‌ಗಳನ್ನು ಸಹ ನಿಯೋಜಿಸಲಾಗಿತ್ತು. ಆರೋಪಿ ಇರುವಿಕೆಯ ಬಗ್ಗೆ ಮಾಹಿತಿ ನೀಡಿದವರಿಗೆ ಪುಣೆ ಪೊಲೀಸರು ಈ ಹಿಂದೆ 1 ಲಕ್ಷ ರೂ. ನಗದು ಬಹುಮಾನವನ್ನು ಸಹ ಘೋಷಿಸಿದ್ದರು.