ಹೆಸರು ಬಹಿರಂಗವಾದ ಬಳಿಕ ನಾಪತ್ತೆಯಾಗಿರುವ ಉಡುಪಿಯ ಮಹಿಳಾ ಸಬ್ಇನ್ಸ್ಪೆಕ್ಟರ್
ಮಂಗಳೂರು : ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಹಾಗೂ ಗೋವಿಂದರಾಜು ಸೇರಿ ಹಲವರ ಮೇಲೆ ವಾಮಾಚಾರ ನಡೆಸಿದ ಘಟನೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಕೈವಾಡವಿರುವ ಅನುಮಾನ ವ್ಯಕ್ತವಾಗಿದೆ.
ವಾಮಾಚಾರಕ್ಕೆ ಸಂಬಂಧಿಸಿ ಈಗಾಗಲೇ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಅಶೋಕ್ ನಗರದ ಸ್ಮಶಾನದಲ್ಲಿ ಇಬ್ಬರು ಆರೋಪಿಗಳು ಕಾಳಿಕಾಂಬಾ ಗುಡಿಯ ಅರ್ಚಕರಿಗೆ ವಿಚಾರ ತಿಳಿಸದೆ ಕುರಿಗಳನ್ನು ಬಲಿ ನೀಡಿ, ವಾಮಾಚಾರ ಮಾಡಿದ್ದಾರೆ ಎಂದು ಪೊಲೀಸರು ತನಿಖೆಯಲ್ಲಿ ತಿಳಿದುಬಂದಿತ್ತು.
ಈಗ ವಾಮಾಚಾರ ಪ್ರಕರಣದಲ್ಲಿ ಉಡುಪಿಯ ಮಹಿಳಾ ಸಬ್ಇನ್ಸ್ಪೆಕ್ಟರ್ ರಾಮಸೇನಾ ಮುಖಂಡ ಪ್ರಸಾದ್ ಅತ್ತಾವರ ಪತ್ನಿ ಸುಮಾ ನಂಟಿದೆ ಎಂದು ಹೇಳಲಾಗಿದೆ. ಮಹಿಳಾ ಪೊಲೀಸ್ ಅಧಿಕಾರಿ ನಂಟಿನ ಬಗ್ಗೆ ಖುದ್ದಾಗಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ವಾಮಾಚಾರ ಪ್ರಕರಣದಲ್ಲಿ ಅವರ ಹೆಸರು ಕೇಳಿಬರುತ್ತಿದ್ದಂತೆ ಅವರು ತಲೆಮರೆಸಿಕೊಂಡಿದ್ದಾರೆ. ಮಂಗಳೂರು ಪೊಲೀಸರು ನೋಟಿಸ್ ಕಳುಹಿಸಿದರೂ ಯಾವ ಉತ್ತರವೂ ಬಂದಿಲ್ಲ. ಪ್ರಸಾದ್ ಅತ್ತಾವರ ಮೊಬೈಲ್ನಲ್ಲಿ ಸಿಕ್ಕ ವಾಮಾಚಾರ ಫೋಟೊಗಳಲ್ಲೂ ಸುಮಾ ಹೆಸರಿದೆ. ಪ್ರಾಣಿ ಬಲಿ ಕೊಡುವ ವೇಳೆ ಚೀಟಿಯಲ್ಲೂ ಸುಮಾ ಹೆಸರು ಉಲ್ಲೇಖಿಸಲಾಗಿದೆ. ಪ್ರಸಾದ್ ಅತ್ತಾವರ, ಸ್ನೇಹಮಯಿ ಕೃಷ್ಣ, ಗಂಗರಾಜು, ಶ್ರೀನಿಧಿ ಹೆಸರಿನ ಜೊತೆ ಸುಮಾ ಹೆಸರು ಉಲ್ಲೇಖಿಸಲಾಗಿದೆ.
ಡಿ.7, 2024ರಂದು ಹಣದ ಬ್ಯಾಗ್ನ ಫೋಟೊ ಸುಮಾಗೆ ಪ್ರಸಾದ್ ಕಳುಹಿಸಿದ್ದರು, ಪ್ರಸಾದ್ ಅತ್ತಾವರ ಜೊತೆ ಪತ್ನಿ ಸುಮಾ ಕೂಡ ಕೇಸ್ನಲ್ಲಿ ನಾಪತ್ತೆಯಾಗಿದ್ದಾರೆ. ಪ್ರಸಾದ್ ಮೂಲಕ ಮೈಸೂರು ಮೂಲದವರು ವಾಮಚಾರ ಮಾಡಿಸಿರುವ ಅನುಮಾನ ಮೂಡಿದೆ. ಬೆಂಗಳೂರಿನ ಅಶೋಕ ನಗರ ಸ್ಮಶಾನದ ಕಾಳಿಕಾಂಬ ಗುಡಿಯಲ್ಲಿ ವಾಮಾಚಾರ ಪ್ರಯೋಗ ಮಾಡಲಾಗಿದೆ. ಪ್ರಸಾದ್ ಅತ್ತಾವರ ಅಧ್ಯಾತ್ಮ ಮತ್ತು ವಿಭಿನ್ನ ಆರಾಧನೆಗಳಲ್ಲಿ ಹಲವು ವರ್ಷಗಳಿಂದ ಆಸಕ್ತಿ ಹೊಂದಿರುವುದು ತಿಳಿದುಬಂದಿದೆ.