ನಿಲ್ಲಿಸಿದ್ದ ಬಸ್‌ಗಳಲ್ಲಿ ರಾಶಿ ರಾಶಿ ಕಾಂಡೋಮ್, ಬಿಯರ್ ಬಾಟಲಿ, ಒಳ ಉಡುಪು ಪತ್ತೆ
ಪುಣೆ : ಪುಣೆಯ ಜನನಿಬಿಡ ಸ್ವಾರ್ಗೇಟ್ ಸರಕಾರಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಮುಂಜಾನೆ ನಡೆದಿರುವ ಅತ್ಯಾಚಾರ ಕೃತ್ಯ ದೇಶಾದ್ಯಂತ ಆಕ್ರೋಶದ ಅಲೆಯೆಬ್ಬಿಸಿದೆ. ನಿಲ್ಲಿಸಿದ್ದ ಸ್ಟೇಷನರಿ ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಹಳೆಯ ಬಳಕೆಯಾಗದ ಬಸ್ಗಳನ್ನು ಅಲ್ಲಿ ನಿಲ್ಲಿಸಲಾಗಿದ್ದು, ಈ ಬಸ್‌ಗಳಲ್ಲಿ ರಾಶಿಗಟ್ಟಲೆ ಕಾಂಡೋಮ್, ಮದ್ಯದ ಬಾಟಲಿಗಳು, ಮಹಿಳೆಯರ ಒಳಉಡುಪುಗಳು ಪತ್ತೆಯಾಗಿದ್ದು ಬಹಳ ಕಾಲದಿಂದ ಇಲ್ಲಿ ಅತ್ಯಾಚಾರ ಮತ್ತಿತರ ಅಪರಾಧ ಕೃತ್ಯಗಳು ನಡೆಯುತ್ತಿದ್ದ ಅನುಮಾನ ಹುಟ್ಟುಹಾಕಿದೆ. ಬಿಯರ್ ಬಾಟಲಿಗಳು, ಸಿಗರೇಟ್ ಪ್ಯಾಕ್ಗಳು, ಕಾಂಡೋಮ್ಗಳು, ಮಹಿಳೆಯರ ಬಟ್ಟೆಗಳು ಹತ್ತಾರು ವಸ್ತುಗಳು ಇಲ್ಲಿ ಪತ್ತೆಯಾಗಿವೆ.
ಅತ್ಯಾಚಾರದ ಸುದ್ದಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಶಿವಸೇನೆ (ಯುಬಿಟಿ)ಯ ಸುಷ್ಮಾ ಅಂಧಾರೆ ಮತ್ತು ಕಸ್ಬಾದ ಮಾಜಿ ಶಾಸಕ ರವೀಂದ್ರ ಧಂಗೇಕರ್ ಮತ್ತು ಎಎಪಿಯ ಮುಕುಂದ್ ಕಿರ್ದತ್ ಅವರಂತಹ ನಾಯಕರು ನಗರ ಪೊಲೀಸರನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿತ್ಯ ಸಾವಿರಾರು ಜನರು ಓಡಾಡುವ, ಸ್ವಾರ್ಗೇಟ್ ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿರುವ ಬಸ್ ನಿಲ್ದಾಣದಲ್ಲಿ ಕೃತ್ಯ ನಡೆದಿದ್ದರೂ ಪೊಲೀಸರಿಗೆ ಗೊತ್ತಾಗದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಏನಾಗಿತ್ತು?
ಮಂಗಳವಾರ ಬೆಳಗ್ಗೆ 5.30 ಹೊತ್ತಿಗೆ 26 ವರ್ಷದ ಮಹಿಳೆಯೊಬ್ಬರು ಸ್ವಾರ್ಗೇಟ್ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ದತ್ತಾತ್ರೇಯ ರಾಮ್‌ದಾಸ್ ಗಡೆ ಎಂದು ಗುರುತಿಸಲಾದ ಆರೋಪಿ ಆಕೆಯ ಬಳಿಗೆ ಬಂದು ನಯವಾಗಿ ಮಾತನಾಡಿ ನೀವು ಹೋಗಬೇಕಾದ ಬಸ್ ಇನ್ನೊಂದು ಪ್ಲಾಟ್‌ಫಾರ್ಮ್‌ನಲ್ಲಿದೆ. ನಾನು ತೋರಿಸುತ್ತೇನೆ ಎಂದು ನಂಬಿಸಿ ಜನರಿಲ್ಲದ ಭಾಗಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನಿಲ್ಲಿಸಿದ್ದ ಸ್ಟೇಷನರಿ ಬಸ್ಸನ್ನು ತೋರಿಸಿ ಇದೇ ನೀವು ಹೋಗಬೇಕಾದ ಬಸ್ ಎಂದಿದ್ದಾನೆ. ಮಹಿಳೆ ಇದನ್ನು ನಿಜವೆಂದು ನಂಬಿ ಬಸ್ ಹತ್ತಿದಾಗ ಆರೋಪಿ ಹಿಂದಿನಿಂದ ಬಂದು ಬಾಗಿಲು ಮುಚ್ಚಿ ಅತ್ಯಾಚಾರ ಎಸಗಿದ್ದಾನೆ. ಮಹಿಳೆ ಈ ಕುರಿತು ಸ್ವಾರ್ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಎಂಟು ತಂಡಗಳನ್ನು ರಚಿಸಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಘಟನೆಗೆ ವಿಷಾದ ವ್ಯಕ್ತಪಡಿಸಿ ಆರೋಪಿಯನ್ನು ಶೀಘ್ರವಾಗಿ ಬಂಧಿಸುವ ಭರವಸೆ ನೀಡಿದ್ದಾರೆ. ಆರೋಪಿಗೆ ಗಲ್ಲು ಶಿಕ್ಷೆಗಿಂತ ಕಡಿಮೆ ಶಿಕ್ಷೆಯಾಗಬಾರದು. ಆರೋಪಿಯನ್ನು ಶೀಘ್ರವಾಗಿ ಬಂಧಿಸಲು ಪುಣೆ ಪೊಲೀಸ್ ಕಮಿಷನರ್‌ಗೆ ಸೂಚಿದ್ದೇನೆ ಎಂದು ಹೇಳಿದ್ದಾರೆ.