ಮಹಾಕುಂಭಮೇಳಕ್ಕೆ ವೈಭವದ ತೆರೆ : 66 ಕೋಟಿಗೂ ಅಧಿಕ ಜನರಿಂದ ಪುಣ್ಯಸ್ನಾನ

183 ದೇಶಗಳ ಪ್ರತಿನಿಧಿಗಳು ಭಾಗಿ; 4 ಲಕ್ಷ ಕೋಟಿ ರೂಪಾಯಿಯಷ್ಟು ವ್ಯವಹಾರ

ಪ್ರಯಾಗರಾಜ್ : ಮಕರ ಸಂಕ್ರಾಂತಿಯಂದು ಶುರುವಾಗಿ ಮಹಾಶಿವರಾತ್ರಿ ತನಕ 45 ದಿನಗಳ ಕಾಲ ನಡೆದ ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭಮೇಳದಲ್ಲಿ 66 ಕೋಟಿಗೂ ಹೆಚ್ಚು ಜನ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಮಹಾಶಿವರಾತ್ರಿಯ ಸ್ನಾನದೊಂದಿಗೆ ವೈಭವದ ಮಹಾಕುಂಭಮೇಳ ಮುಕ್ತಾಯಗೊಂಡಿದೆ. ಮಹಾಕುಂಭದಲ್ಲಿ 5 ಪವಿತ್ರ ಸ್ನಾನಗಳು ನಡೆದವು. ಅವುಗಳಲ್ಲಿ ಮೂರು ಅಮೃತ ಸ್ನಾನಗಳು. ಜನವರಿ 14ರಂದು ಮಕರ ಸಂಕ್ರಾಂತಿ, ಜನವರಿ 29ರಂದು ಮೌನಿ ಅಮಾವಾಸ್ಯೆ ಮತ್ತು ಫೆಬ್ರವರಿ 3ರಂದು ವಸಂತ ಪಂಚಮಿ ಅಮೃತ ಸ್ನಾನಗಳಿದ್ದವು. ಜನವರಿ 19ರ ಮೌನಿ ಅಮಾವಾಸ್ಯೆಯಂದು ಒಂದೇ ದಿನ 10 ಕೋಟಿಗೂ ಹೆಚ್ಚ ಜನರಿಂದ ಎರಡನೇ ಅಮೃತ ಸ್ನಾನ ನಡೆದಿರುವುದು ಕೂಡ ಒಂದು ದಾಖಲೆಯಾಗಿದೆ. 183 ದೇಶಗಳ ಪ್ರತಿನಿಧಿಗಳು ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರ ಕುಂಭಮೇಳದ ವ್ಯವಸ್ಥೆಗಳಿಗಾಗಿ ಸುಮಾರು 12,600 ಕೋಟಿ ರೂ. ವೆಚ್ಚ ಮಾಡಿದೆ. ಆದರೆ ಈ 45 ದಿನಗಳಲ್ಲಿ ಮಹಾಕುಂಭಮೇಳದಿಂದಾಗಿ ಸುಮಾರು 4 ಲಕ್ಷ ಕೋಟಿ ರೂಪಾಯಿಯ ವ್ಯವಹಾರ ನಡೆದಿದೆ. ಎಲ್ಲ ಸ್ತರದ ಜನರು, ವರ್ತಕರು, ಉದ್ಯಮಿಗಳು, ಸಾರಿಗೆಯವರು ಸೇರಿದಂತೆ ಎಲ್ಲರೂ ಒಂದೊಂದು ರೀತಿಯಲ್ಲಿ ಕುಂಭಮೇಳದಿಂದ ಲಾಭ ಮಾಡಿಕೊಂಡಿದ್ದಾರೆ ಎಂದು ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

































 
 

ಮಹಾಕುಂಭಮೇಳದ ಕೊನೆಯ ದಿನವಾದ ಶಿವರಾತ್ರಿಯಂದು 1.44 ಕೋಟಿ ಜನರು ಪುಣ್ಯಸ್ನಾನ ಮಾಡಿದ್ದಾರೆ. ಶಿವರಾತ್ರಿಯ ಹಿನ್ನೆಲೆಯಲ್ಲಿ ನಿನ್ನೆ ನಡೆದ ಕೊನೆಯ ಅಮೃತಸ್ನಾನದಲ್ಲಿ ಒಂದು ಕೋಟಿಗೂ ಅಧಿಕ ಜನರು ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾದರು. ಎಲ್ಲೆಡೆ ಹರ್‌ಹರ್ ಮಹಾದೇವ್ ಎಂಬ ಕೂಗು ಮಾರ್ದನಿಸಿತು.
ರಾತ್ರಿಯಿಂದಲೇ ತ್ರಿವೇಣಿ ಸಂಗಮದಲ್ಲಿ ಬೀಡುಬಿಟ್ಟಿದ್ದ ಕೋಟ್ಯಂತರ ಭಕ್ತರು ಇಂದು ಬ್ರಾಹ್ಮೀ ಮುಹೂರ್ತದಲ್ಲಿ ಪುಣ್ಯಸ್ನಾನ ಮಾಡಿದರು. ಬೆಳಗ್ಗೆ ಎಂಟು ಗಂಟೆಗೆ ಸುಮಾರು 40 ಲಕ್ಷ ಭಕ್ತರು ಅಮೃತ ಸ್ನಾನ ಮಾಡಿದರು. ಸಂಜೆ ಹೊತ್ತಿಗೆಲ್ಲಾ ಈ ಸಂಖ್ಯೆ ಕೋಟಿ ದಾಟಿತು.
ಅಮೃತಸ್ನಾನ ಮಾಡಲು ಬಂದಿದ್ದ ಭಕ್ತರ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸಲಾಯ್ತು. ಸಿಎಂ ಯೋಗಿ ಆದಿತ್ಯನಾಥ್ ಗೋರಖ್‌ಪುರದ ವಾರ್ ರೂಂನಲ್ಲಿ ಕುಳಿತು ಇಡೀ ದಿನ ಮಹಾಕುಂಭಮೇಳವನ್ನು ವೀಕ್ಷಿಸುತ್ತಿದ್ದರು.
ವಿಪಕ್ಷಗಳ ರಾಜಕೀಯ, ಕೆಲ ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ಕುಂಭಮೇಳ ಸುಸೂತ್ರವಾಗಿ ಮುಗಿದಿದೆ. 144 ವರ್ಷಕ್ಕೊಮ್ಮೆ ಬರುವ ಮಹಾ ಕುಂಭಮೇಳ ಹಲವು ದಾಖಲೆ ಬರೆದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top