ಮಂಗಳೂರು: ಭಾರತೀಯ ವಾಯುಪಡೆಯ ಹೆಮ್ಮೆ ಹಾಗೂ ಯಶಸ್ವಿ ಯುದ್ಧವಿಮಾನಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಜಾಗ್ವಾರ್ ವಿಮಾನವನ್ನು ಮುನ್ನಡೆಸಲು ಮಹಿಳೆಯೋರ್ವಳಾದ ಪ್ಲೆಯಿಂಗ್ ಆಫೀಸರ್ ತನುಷ್ಕಾ ಸಿಂಗ್ ಆಯ್ಕೆಯಾಗಿದ್ದಾರೆ.
ಇವರು ಜಾಗ್ವಾರ್ ಯುದ್ಧ ವಿಮಾನ ಸ್ಮಾಡ್ರನ್‌ನಲ್ಲಿ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.
ಜಾಗ್ವಾರ್ ಯುದ್ಧ ವಿಮಾನ ಸ್ಮಾಡ್ರನ್‌ನಲ್ಲಿ ಪೈಲಟ್ ಆಗಿ ಆಯ್ಕೆಯಾದ ತನುಷ್ಕಾ ಸಿಂಗ್, ತಂದೆ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಅಜಯ್ ಪ್ರತಾಪ್ ಸಿಂಗ್ ಅವರ ಪುತ್ರಿ. ಪ್ರಸ್ತುತ ಇವರು ಎಂಆರ್‌ಪಿಎಲ್ ಸಂಸ್ಥೆಯ ಎಚ್‌ಎಸ್‌ಇ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತನುಷ್ಕಾ ಅವರು ಸುರತ್ಕಲ್ ಡಿಪಿಎಸ್ ಎಂಆರ್‌ಪಿಎಲ್ ಶಾಲೆ ಯಲ್ಲಿ ಎಸೆಸೆಲ್ಸಿ, ಮಂಗಳೂರಿನ ಶಾರದಾ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ವಿಜ್ಞಾನ ಶಿಕ್ಷಣದ ಬಳಿಕ ಮಣಿಪಾಲ ಎಂಐಟಿಯಲ್ಲಿ ಎಲೆಕ್ನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ 2022ರಲ್ಲಿ ಬಿ.ಟೆಕ್. ಪದವಿ ಗಳಿಸಿದ್ದಾರೆ.
“ಚಿಕ್ಕಂದಿನಿಂದಲೂ ಸೇನೆಗೆ ಸೇರಬೇಕೆಂಬ ಕನಸು ತನುಷ್ಕಾರವರದ್ದಾಗಿತ್ತು. ಆದರೆ ವಾಯುಪಡೆಗೆ ಸೇರುತ್ತೇನೆ, ಅದರಲ್ಲೂ ಸಮರ ವಿಮಾನದ ಪೈಲಟ್ ಆಗುತ್ತೇನೆ ಎಂದು ಯಾವತ್ತೂ ಯೋಚಿಸಿರಲಿಲ್ಲ” ಎನ್ನುತ್ತಾರೆ ತನುಷ್ಕಾ.
ತನುಷ್ಕಾ ಸಿಂಗ್ ಅವರು ಶಾರ್ಟ್ ಸರ್ವಿಸ್ ಕಮಿಷನ್ ಮೂಲಕ ಭಾರತೀಯ ಸೇನೆಯನ್ನು ಸೇರಲು ಬಯಸಿದ್ದರು. ಆದರೆ ಅಲ್ಲಿ ಮಹಿಳೆಯರಿಗೆ ಹುದ್ದೆಯ ಅವಕಾಶ ಕಡಿಮೆ ಇದ್ದ ಕಾರಣ ವಾಯುಪಡೆ ಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಆಯ್ಕೆಯ ಬಳಿಕ ಒಂದೂವರೆ ವರ್ಷ ಕಾಲ ವಾಯುಪಡೆಯ ಕೆಡೆಟ್ ಆಗಿ ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ವಾಯುಪಡೆ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಅಲ್ಲಿ ಕಮಿಷನ್ X ಅಧಿಕಾರಿಯಾಗಿ ಭಡ್ತಿ ಪಡೆದು ಒಂದು ವರ್ಷ ಕಾಲ ಯುದ್ಧ ವಿಮಾನಗಳ ಪೈಲಟ್ ಆಗಿ ತರಬೇತಿ ಪಡೆದಿದ್ದಾರೆ. ಈ ವೇಳೆ ಅವರು ಹಾಕ್ ಎಂಕೆ 132 ವಿಮಾನವನ್ನು ಚಲಾಯಿಸಿದ್ದಾರೆ.