ಪುತ್ತೂರು: ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಭಾಸ್ಕರ ಗೌಡ ಇಚಿಲಂಪಾಡಿ ಹಾಗೂ ಉಪಾಧ್ಯಕ್ಷರಾಗಿ ಪ್ರವೀಣ್ ರೈ ಪಂಜೊಟ್ಟು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಭಾಸ್ಕರ ಗೌಡ ಅವರು ಈ ಬಾರಿ ಮೊದಲ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಉಪಾಧ್ಯಕ್ಷರಾಗಿ ಕಳೆದ ಬಾರಿ ನಿರ್ದೇಶಕರಾಗಿದ್ದ ಪ್ರವೀಣ್ ರೈ ಪಂಜೊಟ್ಟು ಅವರನ್ನು ಆಯ್ಕೆ ಮಾಡಲಾಯಿತು. ಮಂಗಳವಾರ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ರಾಧಾಕೃಷ್ಣ ಆಳ್ವ ಸಾಜ, ಸಹಕಾರ ಭಾರತಿಯ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು ಶುಭ ಹಾರೈಸಿದರು. ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಮಂಡಲ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲ್, ಮೋಹನ್ ಪಕ್ಕಳ, ಹರೀಶ್ ಬಿಜತ್ರೆ, ವಿದ್ಯಾಧರ್ ಜೈನ್ ಉಪ್ಪಿನಂಗಡಿ ಮತ್ತಿತರರು ಉಪಸ್ಥಿತರಿದ್ದರು.
ಪಕ್ಷದ ತೀರ್ಮಾನಕ್ಕೆ ಬದ್ಧ : ಭಾಸ್ಕರ ಗೌಡ ಇಚಿಲಂಪಾಡಿ
ಕಾರ್ಯಕ್ರಮದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಭಾಸ್ಕರ ಗೌಡ ಇಚಿಲಂಪಾಡಿ ಅವರು ಮೊದಲ ಅವಧಿಗೆ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಕಳೆದ ೫ ವರ್ಷಗಳ ಹಿಂದೆ ಸುಮಾರು ೨ ಕೋಟಿಗೂ ಅಧಿಕ ನಷ್ಟದಲ್ಲಿದ್ದ ಬ್ಯಾಂಕ್ ಈಗ ೩೯ ಲಕ್ಷ ಲಾಭದಲ್ಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ 33 ಗ್ರಾಮಗಳು ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 35 ಗ್ರಾಮಗಳ ವ್ಯಾಪ್ತಿ ಹೊಂದಿರುವ ಈ ಭೂಅಭಿವೃದ್ಧಿ ಬ್ಯಾಂಕ್ ನಲ್ಲಿ ಹಿಂದೆ 4 ಕೋಟಿಗೂ ಅಧಿಕ ಹೆಚ್ಚು ಸಾಲ ಸುಸ್ತಿಯಾಗಿತ್ತು. ಅದನ್ನು ಸುಮಾರು 1.68 ಕೋಟಿಗೆ ತಂದು ನಿಲ್ಲಿಸಿದ್ದೇವೆ. ಬಡವ ಕೃಷಿಕರು ಪ್ರಾಮಾಣಿಕವಾಗಿ ಸಾಲ ವಾಪಾಸಾತಿ ಮಾಡಿದ್ದಾರೆ. ಆದರೆ ಕೆಲವು ಶ್ರೀಮಂತರು ಬಾಕಿ ಉಳಿಸಿಕೊಂಡಿದ್ದಾರೆ. ಈ ಎಲ್ಲಾ ಬಾಕಿ ಸಾಲಗಳನ್ನು ವಸೂಲಿ ಮಾಡಲಾಗುವುದು. ಬ್ಯಾಂಕ್ ನ ಅಧ್ಯಕ್ಷರಾಗಿ ನನಗೆ ಎರಡೂವರೆ ವರ್ಷದ ಅವಧಿ ನೀಡಿದ್ದಾರೆ. ಯಾವುದೇ ಸಂದರ್ಭದಲ್ಲಿಯೂ ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು.
ಸಭೆಯಲ್ಲಿ ಬ್ಯಾಂಕ್ ನಿರ್ದೇಶಕರಾದ ಸುಜಾತ ರೈ ಬಲ್ನಾಡು, ಸುಂದರ ಪೂಜಾರಿ ಬಡಾವು, ಕುಶಾಲಪ್ಪ ಗೌಡ ಅನಿಲ, ಯತೀಂದ್ರ ಕೊಚ್ಚಿ, ವಿಕ್ರಮ್ ರೈ ಸಾಂತ್ಯ, ಚಂದ್ರಾವತಿ ಅಭಿಕಾರ್, ರಾಜುಮೋನು ಕುಟ್ರುಪ್ಪಾಡಿ, ಚೆನ್ನಕೇಶವ ಕೊಂಬಾರು, ಬಾಬು ಮುಗೇರ ನರಿಮೊಗ್ರು, ನಾರಾಯಣ ನಾಯ್ಕ್ ಕೊಲ, ಯುವರಾಜ ಪೆರಿಯತ್ತೋಡಿ ಹಾಗೂ ಕಾಲೇಜು ವಿದ್ಯಾರ್ಥಿನಿಯಾಗಿದ್ದುಕೊಂಡು ನಿರ್ದೇಶಕಿಯಾದ ಸ್ವಾತಿ ರೈ ಆರ್ತಿಲ, ಬ್ಯಾಂಕ್ ಸಿಇಒ ಶೇಖರ್ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.