2 ತಾಸಿನಲ್ಲಿ 34 ಕಿಲೋಮೀಟರ್ ಪ್ರಯಾಣಿಸಿ ಮೂರು ಮನೆಗಳಲ್ಲಿ ಆರು ಮಂದಿಯ ಹತ್ಯೆ
ತಿರುವನಂತಪುರ: ಯುವಕನೊಬ್ಬ ತನ್ನ ಅಜ್ಜಿ,ಅಮ್ಮ, ಸಹೋದರ, ಚಿಕ್ಕಪ್ಪ, ಚಿಕ್ಕಮ್ಮ, ಪ್ರೇಯಸಿ ಸೇರಿ ಆರು ಮಂದಿಯನ್ನು ಬರ್ಬರವಾಗಿ ಕೊಂದಿರುವ ಆಘಾತಕಾರಿ ಘಟನೆಯೊಂದು ಕೇರಳದ ವಂಜರಜಮೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. 23ರ ಹರೆಯದ ಅಫಾನ್ ಎಂಬಾತ 2 ತಾಸಿನ ಅವಧಿಯಲ್ಲಿ ಮೂರು ಮನೆಗಳಲ್ಲಿ ಈ ಕೃತ್ಯಗಳನ್ನು ಎಸಗಿದ್ದಾನೆ. ಆರು ಕೊಲೆಗಳನ್ನು ಮಾಡಲು ಅವನು ಸುಮಾರು 34 ಕಿಲೋಮೀಟರ್ ಪ್ರಯಾಣಿಸಿದ್ದಾನೆ. ನಂತರ ವಂಜರಮೂಡು ಪೊಲೀಸ್ ಠಾಣೆಗೆ ಹೋಗಿ ಶರಣಾಗಿ ಆರು ಕೊಲೆ ಮಾಡಿ ಬಂದಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಈ ಸರಣಿ ಕೊಲೆಗಳ ಹಿಂದಿನ ಕಾರಣವಿನ್ನೂ ತಿಳಿದುಬಂದಿಲ್ಲ. ಅಫಾನ್ ತನ್ನ ಪ್ರೇಯಸಿಯನ್ನು ಕೂಡ ಕೊಂದಿದ್ದಾನೆ. ಇತ್ತೀಚೆಗಷ್ಟೇ ವಿದೇಶದಿಂದ ಆಗಮಿಸಿದ್ದ ಅವನು ಸಾಮಾನ್ಯವಾಗಿಯೇ ವರ್ತಿಸುತ್ತಿದ್ದ. ಹೀಗಾಗಿ ಈ ಕೊಲೆ ಕೃತ್ಯ ನಿಗೂಢವಾಗಿ ಉಳಿದಿದೆ. ಪೊಲೀಸರು ಆಫಾನ್‌ನನ್ನು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ೆಲ್ಲರನ್ನೂ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಸಾಯಿಸಿದ್ದಾನೆ.
14 ವರ್ಷದ ತಮ್ಮ ಅಫ್ಸಾನ್‌ನ ಮೃತದೇಹದ ಸುತ್ತ 500 ರೂ. ನೋಟುಗಳನ್ನು ಚೆಲ್ಲಿದ್ದು ಅನುಮಾನಕ್ಕೆ ಕಾರಣವಾಗಿದೆ. ಅಫ್ಸಾನ್‌ನ ಮೃತದೇಹ ಮನೆಯ ಹಾಲ್‌ನಲ್ಲಿ ಬಿದ್ದಿತ್ತು. ಅದರ ಸುತ್ತ ನೋಟುಗಳಿದ್ದವು. ತಾಯಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಅಫಾನ್‌ನ ಪ್ರೇಯಸಿ ಫರ್ಸಾನಳ ಮೃತದೇಹ ಮೇಲನ ಮಹಡಿಯಲ್ಲಿ ಕುರ್ಚಿಯಲ್ಲಿ ಕುಳಿತುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿರುವ ಫರ್ಸಾನ ಮನೆಯಲ್ಲಿ ಟ್ಯೂಷನ್‌ಗೆಂದು ಹೇಳಿ ಹೋದವಳು ಅಫಾನ್ ಜೊತೆಗೆ ಹೋಗಿದ್ದಳು. ಅದೇ ಅವಳನ್ನು ಮನೆಯವರು ನೋಡಿದ್ದು ಕೊನೆಯ ಬಾರಿ. ನಂತರ ಶವವಾಗಿ ಮನೆಗೆ ಬಂದಿದ್ದಾಳೆ.
ಆರು ಕೊಲೆಗಳನ್ನು ಮಾಡಲು ಅಫಾನ್ 34 ಕಿಲೋಮೀಟರ್ ಪ್ರಯಾಣಿಸಿದ್ದಾನೆ. ಮೊದಲು 14 ಕಿಲೋಮೀಟರ್ ದೂರದಲ್ಲಿರುವ ಪೆರುಮಲಕ್ಕೆ ಹೋಗಿ ಅಜ್ಜಿ ಸಲ್ಮಾಬೀಬಿಯನ್ನು ಹತ್ಯೆ ಮಾಡಿದ್ದಾನೆ. ಅಲ್ಲಿಂದ 7 ಕಿ.ಮೀ. ದೂರವಿರುವ ಚುಲ್ಲಾಲಮ್‌ಗೆ ಹೋಗಿ ತಂದೆಯ ಸಹೋದರ ಲತೀಫ್, ಅವರ ಹೆಂಡತಿ ಶಹೀದಾರನ್ನು ಸಾಯಿಸಿದ್ದಾನೆ. ಅಲ್ಲಿಂದ ರಿಕ್ಷಾ ಹಿಡಿದು ವಾಪಾಸು ತನ್ನ ಮನೆಗೆ ಬಂದು ತಾಯಿ, ಸಹೋದರ ಮತ್ತು ಪ್ರೇಯಸಿಯನ್ನು ಕೊಂದಿದ್ದಾನೆ. ಬಳಿಕ ರಿಕ್ಷಾದಲ್ಲಿ ವೆಂಜರಮೂಡು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಆರಂಭದಲ್ಲಿ ಪೊಲೀಸರು ಇವನು ಆರು ಕೊಲೆಗಳನ್ನು ಮಾಡಿರುವುದನ್ನು ನಂಬಿರಲಿಲ್ಲ. ಆದರೆ ಕೊಲೆಯಾದ ಸ್ಥಳ, ಪ್ರಯಾಣದ ಮಾಹಿತಿಯನ್ನು ಸರಿಯಾಗಿ ತಿಳಿಸಿದ ಬಳಿಕ ನಾಡೇ ಬೆಚ್ಚಿಬೀಳುವ ಕೃತ್ಯ ಎಸಗಿರುವುದು ಕಂಡುಬಂದಿದೆ.