ಪ್ರಯಾಣ ದೂರ, ಸಮಯವನ್ನು ಕಡಿಮೆಗೊಳಿಸಲು ಷಟ್ಪಥ ನಿರ್ಮಾಣಕ್ಕೆ ಪ್ರಸ್ತಾವ
ಬೆಂಗಳೂರು: ಬೆಂಗಳೂರು ಮತ್ತು ಮಂಗಳೂರು ಮಧ್ಯೆ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಬೇಡಿಕೆಯ ಕೇಂದ್ರ ಸರಕಾರ ಸ್ಪಂದಿಸಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಯೋಜನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ.
ಯೋಜನೆ ಪ್ರಕಾರ ಹಾಸನದ ಮೂಲಕ ಈ ಎಕ್ಸ್‌ಪ್ರೆಸ್‌ವೇ ಹಾದು ಹೋಗಲಿದೆ. ಈಗ ಬೆಂಗಳೂರು-ಮಂಗಳೂರು ನಡುವಿನ ಸುಮಾರು 400 ಕಿ.ಮೀ ದೂರ ಕ್ರಮಿಸಲು 7-8 ಗಂಟೆ ಸಮಯ ಹಿಡಿಯುತ್ತದೆ. ನಾಲ್ಕು ಅಥವಾ ಆರು ಪಥಗಳನ್ನು ಒಳಗೊಂಡಿರುವ ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾದರೆ 3-4 ತಾಸಿನೊಳಗೆ ಬೆಂಗಳೂರು-ಮಂಗಳೂರು ನಡುವೆ ಓಡಾಟ ಸಾಧ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕರ್ನಾಟಕ ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. ಎಲ್ಲವೂ ನಿಗದಿಯಂತೆ ನಡೆದರೆ 2028ರಿಂದ ನಿರ್ಮಾಣ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ರಾಜಧಾನಿ ಬೆಂಗಳೂರಿನಿಂದ ಮಂಗಳೂರು ಸಂಪರ್ಕಕ್ಕೆ ಮೂರು ಪ್ರಮುಖ ಮಾರ್ಗಗಳಿವೆ. ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟಿ ಮೂಲಕ ಇಳಿಯಬೇಕಾಗುತ್ತದೆ. ಈ ಪೈಕಿ ಹಾಸನ ಶಿರಾಡಿ ಘಾಟಿ ಬಹಳ ಹತ್ತಿರದ ಮಾರ್ಗವಾಗಿದೆ. ಆದರೆ ಮಳೆಗಾಲದಲ್ಲಿ ಅಲ್ಲಲ್ಲಿ ಭೂಕುಸಿತ ಸಂಭವಿಸಿ ರಸ್ತೆ ಸಂಚಾರ ದುಸ್ತರವಾಗುತ್ತದೆ. ಈ ಕಾರಣಕ್ಕೆ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಬಹುಕಾಲದಿಂದ ಇತ್ತು. ಆದರೆ ಇದಕ್ಕೆ ಪಶ್ಚಿಮಘಟ್ಟದ ಅಪಾರ ಪ್ರಮಾಣದ ಅರಣ್ಯ ನಾಶವಾಗಲಿರುವುದರಿಂದ ಭಾರಿ ವಿರೋಧವೂ ಇದೆ. ಹೊಸತಾಗಿ ರಸ್ತೆ ನಿರ್ಮಿಸುವ ಬದಲು ಈಗ ಇರುವ ರಸ್ತೆಗಳನ್ನೇ ಮೇಲ್ದರ್ಜೆಗೇರಿಸಿ ಸರಾಗ ಓಡಾಟಕ್ಕೆ ಅನುಕೂಲ ಮಾಡಿಕೊಡಬಹುದು ಎಂದು ಪರಿಸರ ತಜ್ಞರು ಹೇಳುತ್ತಿದ್ದಾರೆ. ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಸಮಗ್ರ ಯೋಜನಾ ವರದಿಗಾಗಿ ಸರ್ಕಾರ ಜುಲೈನಲ್ಲಿ ಟೆಂಡರ್ ಆಹ್ವಾನಿಸಿತ್ತು. ನವೆಂಬರ್ ವೇಳೆಗೆ 9 ಕಂಪನಿಗಳು ಬಿಡ್ ಸಲ್ಲಿಸಿದ್ದು ಈ ಪೈಕಿ ಒಂದು ಕಂಪನಿಯನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಕಂಪನಿಗೆ ಡಿಪಿಆರ್ ಪೂರ್ಣಗೊಳಿಸಲು 540 ದಿನಗಳ ಸಮಯವನ್ನು ನೀಡಲಾಗುತ್ತದೆ. ಡಿಪಿಆರ್ ಪೂರ್ಣಗೊಂಡ ಬಳಿಕ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಕೆಲಸ ಆರಂಭವಾಗಲಿದೆ.