13 ಸಾವಿರ ಸೈನಿಕರಿಂದ ಕಟ್ಟೆಚ್ಚರದ ಕಾವಲು
ಇಸ್ಲಾಮಾಬಾದ್ : ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಕೂಟದ ಮೇಲೆ ಭಯೋತ್ಪಾದಕರ ಕರಿನೆರಳು ಆವರಿಸಿದೆ. ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ಐಎಸ್ಕೆಪಿ) ಎಂಬ ಭಯೋತ್ಪಾದಕ ಸಂಘಟನೆ ವಿದೇಶಿ ಪ್ರವಾಸಿಗರನ್ನು ಅಪಹರಿಸಿ ಒತ್ತೆ ಹಣಕ್ಕೆ ಬೇಡಿಕೆ ಇಡಬಹುದು ಎಂಬ ಗುಪ್ತಚರ ಮಾಹಿತಿ ಬಂದ ಬಳಿಕ ಪಾಕಿಸ್ಥಾನದಲ್ಲಿ ಕ್ರಿಕೆಟ್ ಆಡುತ್ತಿರುವ ವಿದೇಶಿ ಆಟಗಾರರಿಗೆ ಜೀವ ಬೆದರಿಕೆ ಶುರುವಾಗಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಕೂಟಕ್ಕೆ ಪಾಕ್ ಸರಕಾರ ಭಾರಿ ಭದ್ರತೆಯ ಏರ್ಪಾಡು ಮಾಡಿದೆ. ಭದ್ರತೆಗೆ 13 ಸಾವಿರ ಸೈನಿಕರನ್ನು ನಿಯೋಜಿಸಲಾಗಿದ್ದು, ಒಬ್ಬ ಆಟಗಾರನ ಭದ್ರತೆಯಲ್ಲಿ 100 ಪೊಲೀಸರು ತೊಡಗಿಸಿಕೊಂಡಿದ್ದಾರೆ.
ಫೆಬ್ರವರಿ 19ರಿಂದ ಪಾಕಿಸ್ಥಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಿದೆ. ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸುತ್ತಿವೆ. ಟೀಂ ಇಂಡಿಯಾ ಭಯೋತ್ಪಾದಕರ ಬೆದರಿಕೆಯಿರುವ ಕಾರಣ ಪಾಕಿಸ್ಥಾನದಲ್ಲಿ ಆಡಲು ನಿರಾಕರಿಸಿರುವುದರಿಂದ ಭಾರತ ಆಡುವ ಎಲ್ಲ ಪಂದ್ಯಗಳನ್ನು ದುಬೈಯಲ್ಲಿ ಏರ್ಪಡಿಸಲಾಗಿದೆ. ಉಳಿದ ಪಂದ್ಯಗಳೆಲ್ಲ ಪಾಕಿಸ್ಥಾನದಲ್ಲೇ ನಡೆಯುತ್ತಿವೆ. ಪಾಕಿಸ್ಥಾನದಲ್ಲಿ ಕ್ರಿಕೆಟಿಗರ ಮೇಲೂ ಉಗ್ರರು ದಾಳಿ ನಡೆಸಿರುವ ಇತಿಹಾಸ ಇರುವ ಹಿನ್ನೆಲಿಯಲ್ಲಿ ಈಗ ಭಯ ಶುರುವಾಗಿದೆ.
ಉಳಿದ ಏಳು ತಂಡಗಳ ಭದ್ರತೆಗಾಗಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಪಾಕಿಸ್ಥಾನದ ಮೂರು ನಗರಗಳಾದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ನಲ್ಲಿ ಪಂದ್ಯಗಳು ನಡೆಯುತ್ತಿವೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಲಾಹೋರ್ನಲ್ಲಿ 8 ಸಾವಿರ ಸೈನಿಕರನ್ನು ಮತ್ತು ರಾವಲ್ಪಿಂಡಿಯಲ್ಲಿ 5 ಸಾವಿರ ಸೈನಿಕರನ್ನು ನಿಯೋಜಿಸಲಾಗಿದೆ. ಇದಲ್ಲದೆ, ಪಾಕಿಸ್ಥಾನಿ ಪೊಲೀಸರೂ ಕಟ್ಟೆಚ್ಚರದಲ್ಲಿದ್ದಾರೆ.
ಕ್ರಿಕೆಟಿಗರಿಗೆ ಪೊಲೀಸರು ಮತ್ತು ಸೇನೆ ಒಟ್ಟಾಗಿ ಭದ್ರತೆ ಒದಗಿಸುತ್ತಿವೆ. ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಪೊಲೀಸರ 135 ಇನ್ಸ್ಪೆಕ್ಟರ್ಗಳು, 54 ಡಿಎಸ್ಪಿಗಳು ಮತ್ತು 18 ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 200ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿಯ ಮೇಲೆ ಭದ್ರತೆಯ ಜವಾಬ್ದಾರಿಯೂ ಇದೆ. ಹಾಗೆಯೇ 10 ಸಾವಿರಕ್ಕೂ ಹೆಚ್ಚು ಸೈನಿಕರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
ಸುಮಾರು 10 ಸಾವಿರ ಪೊಲೀಸರು ಮೈದಾನದಲ್ಲಿದ್ದು, ಆಟಗಾರರು ಕ್ರೀಡಾಂಗಣದಿಂದ ಹೋಟೆಲ್ಗೆ ಮತ್ತು ಹೋಟೆಲ್ನಿಂದ ಕ್ರೀಡಾಂಗಣಕ್ಕೆ ಹೋಗುವಾಗ ಭದ್ರತೆ ಒದಗಿಸುತ್ತಿದ್ದಾರೆ. ಒಬ್ಬ ಆಟಗಾರನ ಭದ್ರತೆಗಾಗಿ ಸರಾಸರಿ 100 ಪಾಕಿಸ್ಥಾನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
2009ರಲ್ಲಿ ಶ್ರೀಲಂಕಾ ತಂಡ ಟೆಸ್ಟ್ ಸರಣಿಗಾಗಿ ಪಾಕಿಸ್ಥಾನ ಪ್ರವಾಸ ಮಾಡಿತ್ತು. ಶ್ರೀಲಂಕಾ ತಂಡ ಹೋಟೆಲ್ನಿಂದ ಲಾಹೋರ್ ಕ್ರೀಡಾಂಗಣಕ್ಕೆ ಹೋಗುತ್ತಿದ್ದಾಗ ಭಯೋತ್ಪಾದಕರು ತಂಡದ ಬಸ್ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ 6ಕ್ಕೂ ಹೆಚ್ಚು ಶ್ರೀಲಂಕಾದ ಆಟಗಾರರು ಗಾಯಗೊಂಡಿದ್ದರು. ಅವರಲ್ಲಿ ಮಹೇಲ ಜಯವರ್ಧನೆ, ಕುಮಾರ್ ಸಂಗಕ್ಕಾರ ಮತ್ತು ಚಾಮಿಂಡಾ ವಾಸ್ ಅವರಂತಹ ಸ್ಟಾರ್ ಆಟಗಾರರು ಕೂಡ ಸೇರಿದ್ದರು.